ಸೋಮವಾರಪೇಟೆ, ಜು. 27: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಗೌರವಿಸಲಾಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದ್ದು, ತಾವುಗಳು ಪ್ರಾಮಾಣಿಕತೆ ಮೆರೆಯುವದರೊಂದಿಗೆ ಸಮಾಜಕ್ಕೆ ಮಾದರಿಯಾಗಿರಬೇಕೆಂದು ತಿಳಿ ಹೇಳಿದರು.

ಶಿಕ್ಷಕರು ಸಮಾಜದ ಮಾರ್ಗದರ್ಶಕರು, ಅವರುಗಳು ಶಿಸ್ತು ಸಂಯಮದೊಂದಿಗೆ ಸಮಾಜದಲ್ಲಿನ ಧರ್ಮಗುರುಗಳಂತೆ ಕರ್ತವ್ಯವನ್ನು ಮೆರೆಯಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವದರೊಂದಿಗೆ ಅವರುಗಳಲ್ಲಿರುವ ನೈಪುಣ್ಯತೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಮಾತನಾಡಿ, ಸ್ಥಳೀಯ ಶಾಸಕರ ವಿಶೇಷ ಪ್ರಯತ್ನದಿಂದಾಗಿ ಸೈನಿಕ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಅಂಬೇಡ್ಕರ್ ವಸತಿ ಶಾಲೆ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಮೆಡಿಕಲ್ ಕಾಲೇಜು, ಅಳುವಾರದಲ್ಲಿ ವಿಶ್ವವಿದ್ಯಾ ನಿಲಯಗಳನ್ನು ತೆರೆದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿ ಕೊಟ್ಟಿರುವದು ಶ್ಲಾಘನೀಯ ಎಂದರು.

ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ಪ್ರಯತ್ನದೊಂದಿಗೆ ತಾಲೂಕು ಕೇಂದ್ರದಲ್ಲಿರುವ ಚನ್ನಬಸಪ್ಪ ಸಭಾಂಗಣ ದುಸ್ಥಿತಿಗೆ ತಲಪಿದ್ದು ಅದನ್ನು ನವೀಕರಿಸಿಕೊಡಬೇಕೆಂದು ಸಂಘದ ಪರವಾಗಿ ಶಾಸಕರಿಗೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಾಲ್ಕು ಬಾರಿ ಆಯ್ಕೆಯಾಗಿ, ಎರಡನೇ ಬಾರಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಮುಖ್ಯ ಶಿಕ್ಷಕಿ ಉಮಾವತಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಲಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನ, ಶಿಕ್ಷಕರುಗಳಾದ ಕೆ.ಡಿ. ನವೀನ, ಟಿ.ಕೆ. ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.