ಸೋಮವಾರಪೇಟೆ, ಜು. 27: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿ ಗಳನ್ನಾಗಿ ಮಾಡುವದರೊಂದಿಗೆ ದೇಶಾಭಿಮಾನವನ್ನು ಮೈಗೂಢಿಸುವ ಸಂಸ್ಥೆಯಾಗಿದೆ ಎಂದು ಸೋಮವಾರಪೇಟೆ ಸ.ಮಾ.ಪ್ರಾ. ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಅಭಿಪ್ರಾಯಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲೂಕು ಸಂಸ್ಥೆಯ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ದೇಶಪ್ರೇಮವನ್ನು ಮೈಗೂಢಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕು. ಹಾಗಾದಾಗ ಮಾತ್ರ ಸೌಟ್ಸ್- ಗೈಡ್ಸ್‍ಗಳಾಗಿದ್ದಕ್ಕೆ ಸಾರ್ಥಕತೆ ಬರಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ತಾಲೂಕು ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವನ್ನು ಹೆಚ್ಚಿಸಲು ನಮ್ಮ ಸಂಸ್ಥೆಯು ಕಳೆದೆರಡು ವರ್ಷಗಳಿಂದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರುತ್ತಿದೆ. ತಾಲೂಕು ಮಟ್ಟದಲ್ಲಿ ಆಯ್ಕೆಯಾದವರನ್ನು ಜಿಲ್ಲಾ ಮಟ್ಟಕ್ಕೆ, ಜಿಲ್ಲೆಯಲ್ಲಿ ಆಯ್ಕೆಯಾದ ವರನ್ನು ರಾಜ್ಯಮಟ್ಟಕ್ಕೆ ಕಳುಹಿಸಿ ಕೊಡಲಾಗುವದು. ಇಂತಹ ಸ್ಪರ್ಧೆಗಳಲ್ಲಿ ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆಯೇ ಮುಖ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯ ಕಾರ್ಯ ದರ್ಶಿ ಟಿ.ಎಸ್. ಚಂದ್ರಶೇಖರ್, ಖಜಾಂಚಿ ಕೆ.ಟಿ. ಚಂದ್ರಕಲಾ, ಕುಂಬೂರು ಸರಕಾರಿ ಶಾಲೆಯ ಗೈಡ್ಸ್ ಶಿಕ್ಷಕಿ ಸರಳಕುಮಾರಿ ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡಗಳು ಗೀತ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಮೆರೆದರು.