ಕುಶಾಲನಗರ, ಜು. 27: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಲಾರಿ ಮುಷ್ಕರ 9ನೇ ದಿನಕ್ಕೆ ಕಾಲಿರಿಸಿದೆ.
ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕುಶಾಲನಗರದ ಕಾವೇರಿ ಲಾರಿ ಮಾಲೀಕರ ಸಂಘ ಪದಾಧಿಕಾರಿಗಳು ತಮ್ಮ ಲಾರಿಗಳ ಸೇವೆ ಸ್ಥಗಿತಗೊಳಿಸಿ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಇತರ ಸರಕು ತುಂಬಿದ ಲಾರಿಗಳ ಸಂಚಾರಕ್ಕೆ ತಡೆಯೊಡ್ಡಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಪಟ್ಟಣದ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ ನೂರಾರು ಸರಕು ತುಂಬಿದ ಲಾರಿಗಳು ಸಾಲಾಗಿ ನಿಲುಗಡೆಗೊಂಡಿರುವದು ಕಂಡುಬಂದಿದೆ.
ತಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿರುವ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಗಣೇಶ್, ಸರಕಾರ ಕೂಡಲೇ ಎಚ್ಚೆತ್ತು ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರ ಹಾಗೂ ಜಿಲ್ಲೆಗೆ ನೆರೆ ಜಿಲ್ಲೆಗಳಿಂದ ಆಗಮಿಸುವ ಸರಕು ಸಾಗಾಟ ಲಾರಿಗಳು ಸಂಚಾರ ಸ್ಥಗಿತಗೊಂಡಿದ್ದು ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯುಂಟಾಗಿದೆ.