ಮಡಿಕೇರಿ, ಜು. 27: ಸರ್ಕಾರದ ವಿವಿಧ ಯೋಜನೆಗಳ ಕುರಿತು ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಮೂಲಕ ಪ್ರಚಾರ ಮಾಡುವ ಅರ್ಹ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೀದಿ ನಾಟಕ ತಂಡ ಪ್ರದರ್ಶನದಲ್ಲಿ ಅನುಭವ ಹೊಂದಿರಬೇಕು. ತಂಡವು ಸರ್ಕಾರದ ನಿಯಮದಂತೆ ನೋಂದಣಿಯಾಗಿರಬೇಕು. ಬೀದಿ ನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಕಲಾವಿದರು ಹಾಗೂ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. ಬೀದಿ ನಾಟಕ ತಂಡದ ಎಲ್ಲಾ ಕಲಾವಿದರ ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರಬೇಕು. ಕಲಾ ತಂಡ ಮತ್ತು ಕಲಾವಿದರು ಜಿಲ್ಲೆಯವರಾಗಿರಬೇಕು.

ಜಾನಪದ ಸಂಗೀತ ಕಾರ್ಯಕ್ರಮದ ತಂಡದಲ್ಲಿ ಮೂವರು ಕಡ್ಡಾಯವಾಗಿ ಇರಬೇಕು. ಈ ಮೂವರಲ್ಲಿ ಒಬ್ಬರು ಮಹಿಳೆಯರು ಹಾಗೂ ಒಬ್ಬ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಕಲಾವಿದರಿರಬೇಕು. ತಂಡ ಆಯ್ಕೆ ಸಂದರ್ಭ ತಂಡದ ಮುಖ್ಯಸ್ಥರು ಸೇರಿದಂತೆ, ಕಲಾವಿದರು ಕಡ್ಡಾಯವಾಗಿ ಹಾಜರಾಗಬೇಕು. ತಜ್ಞರ ಸಮಿತಿ ಮೂಲಕ ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮದ ಕಲಾ ತಂಡವನ್ನು ಆಯ್ಕೆ ಮಾಡಲಾಗುವದು. ಕಲಾವಿದರ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪಾನ್ ಕಾರ್ಡ್‍ನ ಪ್ರತಿ ಹಾಗೂ ಕಲಾವಿದರ ವಿಳಾಸ, ಮೊಬೈಲ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ಭಾವಚಿತ್ರ ಸಹಿತ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಟುವರ್ಟ್ ಹಿಲ್‍ರಸ್ತೆ, ಮಡಿಕೇರಿ ಕಚೇರಿಯನ್ನು ಸಂಪರ್ಕಿಸಬಹುದು.