ಶ್ರೀಮಂಗಲ, ಜು. 27: ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಾಮುಖ್ಯತೆ ಪಡೆದಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಸಮಾಜದ ಒಳಿತಿಗಾಗಿ ಸಂಘಟಿತರಾಗಲು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಚೆಟ್ಟಂಡ ಎಂ. ನಾಚಪ್ಪ ಅಭಿಪ್ರಾಯಪಟ್ಟರು.
ಶ್ರೀಮಂಗಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲಿ ವಿಜ್ಞಾನದ ಒಳಿತು ಹಾಗೂ ದುಷ್ಟರಿಣಾಮ, ಶಿಕ್ಷಣದ ಅನಿವಾರ್ಯತೆ, ನಾಯಕತ್ವ ಗುಣ, ಜೀವನದಲ್ಲಿ ಸಾಧನೆಗೈಯಲು ಬೇಕಾದ ನಿರಂತರ ಪರಿಶ್ರಮ, ಗುರಿ ಹಾಗೂ ಉದ್ದೇಶದ ಬಗ್ಗೆ ವಿವರಿಸಿದರು.
ಆಡಳಿತ ಮಂಡಳಿ ಅಧ್ಯಕ್ಷರಾದ ಮದ್ರೀರ ಪಿ. ವಿಷ್ಣು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ, ನಿರ್ದೇಶಕರಾದ ಕುಂಞಂಗಡ ರಮೇಶ್, ಮಂದಮಾಡ ಗಣೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರತ್ನಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಚೆಟ್ಟಂಗಡ ಸುನಿತ ಕಿರಣ್, ಚೆಕ್ಕೆರ ಪೊನ್ನಮ್ಮ ಹಾಜರಿದ್ದರು.
ಅಧ್ಯಾಪಕ ಕೆ.ಆರ್. ಅರುಣಾಚಲ್ ಸ್ವಾಗತಿಸಿ, ಉಪನ್ಯಾಸಕಿ ಸುಜಾತ ವಂದಿಸಿದರು. ಅಧ್ಯಾಪಕಿ ಬಾಳೆಯಡ ಕಾವೇರಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು.