ಶ್ರೀಮಂಗಲ, ಜು. 27: ಮುಂಗಾರು ಮಳೆ ಈ ಬಾರಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬಿಡುವು ನೀಡದೆ ಕಳೆದ ಜೂನ್ 8 ರಿಂದ ನಿರಂತರವಾಗಿ ಸುರಿಯುತ್ತಿದ್ದು, ಧಾರಾಕಾರ ಮಳೆಯಿಂದ ಕಾಫಿ, ಕರಿಮೆಣಸು, ಅಡಿಕೆ, ಬೆಳೆಗಳ ನಷ್ಟದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ಮುಂಗಾರು ಮಳೆ ಮತ್ತೆ ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಜೋರಾಗಿದೆ.
ಕೊಳೆರೋಗಕ್ಕೆ ತುತ್ತಾಗಿರುವ ಕಾಫಿ ತೋಟದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಉದುರಿದೆ. ಇದಲ್ಲದೆ, ಕೊಳೆ ರೋಗ ತಡೆಗಾಗಿ ಅಡಿಕೆಗೆ ಔಷಧಿ ಸಿಂಪಡಣೆ ಮಾಡಿದ್ದರೂ ಕೊಳೆ ರೋಗಕ್ಕೆ ತುತ್ತಾಗಿ ಉದುರಿ ಬಿದ್ದಿದೆ. ಕೊಳೆ ರೋಗ ಹತೋಟಿಗೆ ಮತ್ತೆ ಔಷಧಿ ಸಿಂಪಡಣೆ ಮಾಡಲು ಮಳೆ ಬಿಡುವು ನೀಡುತಿಲ್ಲ. ಇದರಿಂದ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಿಂಪಡಣೆಗೆ ಔಷಧಿಯ ದ್ರಾವಣವನ್ನು ಸಿದ್ಧಪಡಿಸಿಕೊಂಡು ಸಿಂಪಡಣೆಗೆÉ ಮುಂದಾಗುವ ಸಂದರ್ಭ ಮಳೆ ಬರುತ್ತಿದ್ದು ಇದರಿಂದ ಸಿಂಪಡಣೆ ಮಾಡಿದರೂ ಯಾವದೇ ಪ್ರಯೋಜನ ವಿಲ್ಲದಂತಾಗಿದೆ. ಮಳೆಗೆ ಔಷಧಿ ತೊಯ್ದು ಹೋಗುತ್ತಿದೆ ಎಂದು ಬಾಡಗರಕೇರಿ ಪೊರಾಡು ಗ್ರಾಮದ ಮೀದೇರಿರ ಸುರೇಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ವ್ಯಾಪ್ತಿಯಲ್ಲಿ ಅತಿಯಾದ ತೇವಾಂಶದಿಂದ ಕರಿಮೆಣಸು ಬಳ್ಳಿಗಳಿಗೂ ಕೊಳೆ ರೋಗ ತಗುಲಿದ್ದು, ಪ್ರಸಕ್ತ ವರ್ಷ ಕರಿಮೆಣಸು ಫಸಲು ತೀವ್ರ ಕುಸಿತ ವಾಗಿದೆ. ಆದರೆ, ಈ ಹವಾಮಾನ ದಲ್ಲಿ ಬಳ್ಳಿಗಳನ್ನು ರಕ್ಷಿಸಿಕೊಳ್ಳುವದೇ ದೊಡ್ಡ ಸಾಹಸವಾಗಿದೆ. ಬಳ್ಳಿಗಳು ತೇವಾಂಶದಿಂದ ಅರಶಿಣ ಬಣ್ಣಕ್ಕೆ ತಿರುಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀಮಂಗಲದ ಬೆಳೆಗಾರ ಚೆಟ್ಟಂಡ ರಘು ಪ್ರತಿಕ್ರಿಯಿಸಿ ಇದುವರೆಗೆ ಶ್ರೀಮಂಗಲಕ್ಕೆ 93.23 ಇಂಚು ಮಳೆಯಾಗಿದೆ. ಕಳೆದ ಬಾರಿ ಇದೇ ಅವಧಿಗೆ 45 ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ 40.75 ಮತ್ತು ಜುಲೈ ತಿಂಗಳಲ್ಲಿ ಇದುವರೆಗೆ 39 ಇಂಚು ಮಳೆಯಾಗಿದೆ.ಕಳೆದ ವರ್ಷ ಒಟ್ಟು 69.70 ಇಂಚು ಮಳೆಯಾಗಿತ್ತು. ನಿರಂತರ ಮಳೆಯಿಂದ ಕಾಫಿ, ಕರಿಮೆಣಸು, ಅಡಿಕೆ ಫಸಲಿಗೆ ತೀವ್ರ ಹಾನಿಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಬಿರುನಾಣಿ ವಿಭಾಗಕ್ಕೆ ಇದುವರೆಗೆ 162 ಇಂಚು ಮಳೆಯಾಗಿದ್ದು, ಕಳೆದ ವರ್ಷ ಒಟ್ಟು 165 ಮಳೆಯಾಗಿತ್ತು. ಕಳೆದ ವರ್ಷದ ಒಟ್ಟು ಮಳೆಯ ಪ್ರಮಾಣದ ಮಳೆ ಇದುವರೆಗೆ ಆಗಿದ್ದು, ಕಳೆದ 24 ಗಂಟೆಯಲ್ಲಿ 3.10 ಇಂಚು ಮಳೆ ದಾಖಲಾಗಿದೆ.