ಮಡಿಕೇರಿ, ಜು. 27: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ನೂತನ ಸರ್ಟಿಫಿಕೇಟ್ ಕೋರ್ಸ್ಗಳ ಉದ್ಘಾಟನಾ ಸಮಾರಂಭ ನಡೆಯಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ರಂಗದಲ್ಲು ಸ್ಪರ್ಧೆಯನ್ನು ಕಾಣುತ್ತೇವೆ. ಗ್ರಾಮೀಣ ವಿದ್ಯಾರ್ಥಿಗಳು ಪದವಿಯ ನಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪದವಿಯ ಜೊತೆಗೆ ಇನ್ನಷ್ಟು ವಿಷಯಗಳನ್ನು ಹೆಚ್ಚುವರಿಯಾಗಿ ಕಲಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪದವಿಯ ಜೊತೆಗೆ ಇನ್ನಷ್ಟು ಕಲಿತಾಗ ಅವರ ಸರ್ವತೋಮುಖವಾದ ಬೆಳವಣಿಗೆ ಸಾಧ್ಯ. ಈ ಹಿನ್ನೆಲೆ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರು ತಿಳಿಸಿದರು.
ಪ್ರಥಮ ಬಿ.ಕಾಂ ತರಗತಿಗೆ ಯೋಗ ಮತ್ತು ಧ್ಯಾನ ದ್ವಿತೀಯ ಬಿ.ಕಾಂ ಗೆ ಪತ್ರಿಕೋದ್ಯಮ ಹಾಗೂ ಅಂತಿಮ ಬಿ.ಕಾಂ ಗೆ ಸಂವಹನ ಇಂಗ್ಲೀಷ್ ಕೌಶಲ್ಯ ಕೋರ್ಸ್ಗಳನ್ನು ಆರಂಭಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯೋಗ ಗುರು ಮಹೇಶ್ ಮಾತನಾಡಿ, ಯೋಗ ಇಂದು ಜಗತ್ತನ್ನೇ ತನ್ನಡೆಗೆ ಸೆಳೆದಿದೆ, ಯೋಗದಿಂದ ಶಾಂತಿ, ಪ್ರೀತಿ ಹರಡುವದರ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವದು ಸಾಧ್ಯ ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಹರೀಶ್ ಸರಳಾಯ ಮಾತನಾಡಿ, ಪತ್ರಿಕೋದ್ಯಮ ಸಂವಿಧಾನದ ಒಂದು ಆಧಾರ ಸ್ತಂಭ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸತ್ಯ ಮತ್ತು ನ್ಯಾಯಯುತವಾದ ವರದಿಗಳು ಬರಬೇಕೆಂದು ಆಶಿಸಿದರು.
ಸಂವಹನ ಇಂಗ್ಲೀಷ್ ಕೌಶಲ್ಯದ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಪ್ರೊ. ಭಾಗೀರಥಿ ಅವರು ಇಂಗ್ಲೀಷ್ ವಿಶ್ವಭಾಷೆಯಾಗಿದ್ದು, ಜಗತ್ತನ್ನೇ ಅಂಗೈಯಲ್ಲಿ ತರುತ್ತಿದೆ. ವಿದ್ಯಾರ್ಥಿಗಳು ಉತ್ತಮ ಇಂಗ್ಲೀಷ್ ಭಾಷೆ ಕೌಶಲ್ಯ ರೂಢಿಸಿಕೊಂಡಾಗ ಹೆಚ್ಚು ಉದ್ಯೋಗದ ಅವಕಾಶಗಳು ದೊರಕುತ್ತದೆ ಎಂದರು. ಈ ಸಂದರ್ಭ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ತೋರಿದ ಹಳೆಯ ವಿದ್ಯಾರ್ಥಿನಿಯರಾದ ಗೌತಮಿ, ಶಲ್ಯ ಹಾಗೂ ಅಂತಿಮ ಬಿ.ಕಾಂ ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಮತ್ತು ಸುಶ್ಮಿತಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಜಿ. ಮಾದಪ್ಪ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಹಾಗೂ ಸಂಸ್ಥೆಯ ಇತರ ನಿರ್ದೇಶಕರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಉಪನ್ಯಾಸಕಿ ವಿಲ್ಮ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಗೌರಮ್ಮ ಮತ್ತು ವೀಕ್ಷಿತಾ ಹಾಗೂ ಉಪನ್ಯಾಸಕ ದರ್ಶನ್ ನಿರೂಪಿಸಿ, ಉಪನ್ಯಾಸಕಿ ಶಾರದ ವಂದಿಸಿದರು.