ಗೋಣಿಕೊಪ್ಪಲು, ಜು.27: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರು ಪೂರ್ಣಿಮೆ ದಿನಾಚರಣೆ ಯಶಸ್ವಿಯಾಗಿ ಜರುಗಿತು.ಮೈಸೂರಿನ ಬೇಲೂರು ಮಠದ ಟ್ರಸ್ಟಿ ಸ್ವಾಮಿ ಮುಕ್ತಿನಂದಾಜೀ ಮಹಾರಾಜ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.

ಆಶ್ರಮದ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಮುಕ್ತಿನಂದಾಜೀ ಮಹಾರಾಜ್ ಅವರು ಇಂದು ಆದ್ಯಾತ್ಮಿಕ ಬೆಳವಣಿಗೆ ಕಡಿಮೆ ಯಾಗುತ್ತಿದೆ; ಭಗವಂತನಲ್ಲಿ ನಂಬಿಕೆ ಇಡಬೇಕಾಗಿದೆ. ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಂದೇಶವನ್ನು ಎಲ್ಲರೂ ತಿಳಿದು ಕೊಳ್ಳಬೇಕು. ಎಲ್ಲ ಧರ್ಮದ ಸಂಸ್ಕøತಿಗೆ ತನ್ನದೇ ಆದ ಗೌರವವಿದೆ. ನಾನು ಎಂಬ ಅಹಂ ಅನ್ನು ಬಿಡುವ ಮೂಲಕ ಸಮಾಜದ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ ಇಂದು ವೃದ್ಧಾಪ್ಯ ದಲ್ಲಿರುವ ಹೆತ್ತ ತಂದೆ ತಾಯಿಯನ್ನು ನೋಡುವ ಸೌಜನ್ಯ ಇಲ್ಲದಂತಾಗಿದೆ. ಹೆತ್ತ ತಂದೆ ತಾಯಿಗಳು ಮಾಡಿರುವ ಆಸ್ತಿ ಹಣದಿಂದ ಐಷರಾಮಿ ಬದುಕನ್ನು ಕಟ್ಟಿಕೊಂಡು ಇರುವವರು ಈ ರೀತಿ ಮಾಡುತ್ತಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದಲ್ಲಿ ಉತ್ತಮರು ಎನಿಸಿಕೊಂಡಿರುವವರು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮದಲ್ಲಿ ಆಶ್ರಯ ನೀಡುತ್ತಿರುವದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು ಚರಾಸ್ತಿ ಮಾಡುವ ಬದಲು ತಮ್ಮ ಮಕ್ಕಳನ್ನು ಸ್ತಿರಾಸ್ಥಿ ಎಂದು ಭಾವಿಸಿ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವ ಮೂಲಕ ಐಎಸ್, ಐಪಿಎಸ್, ಐಎಫ್‍ಎಸ್ ಮಾಡಿಸಲು ಪ್ರಯತ್ನಿಸಬೇಕೆಂದು ಹೇಳಿದರು.

ಕೂರ್ಗ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಕೆ.ಪಿ.ಉತ್ತಪ್ಪ ಮಾತನಾಡುತ್ತ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಮುಂದೆ ಬರಬೇಕು ಆ ಮೂಲಕ ಸಮಾಜದ ಕಾರ್ಯಗಳಲ್ಲಿ ಜನತೆ ತೊಡಗಿಸಿಕೊಳ್ಳಬೇಕೆಂದರು.

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋದಸ್ವರೂಪನಂದಾಜೀಮಹರಾಜ್ ಮಾತನಾಡಿ ಆಶ್ರಮದ ಏಳಿಗೆಗೆ ನಾಡಿನ ಅಪಾರ ಸಂಖ್ಯೆಯ ಧಾನಿಗಳ ಸಹಾಯವಿದೆ. ಪ್ರತಿ ನಿತ್ಯ ಹಲವು ಕಾರ್ಯಕ್ರಮಗಳನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ. ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ ಎಂಬ ಆರು ನೂರು ಪುಟದ ಪುಸ್ತಕವನ್ನು ಹೊಟ್ಟೇಂಗಡ ಸುಂದರಿ ಮೇದಪ್ಪ ಕೊಡವ ಭಾಷೆಯಲ್ಲಿ ಬರೆಯುವ ಮೂಲಕ ಕೊಡಗು ಜಿಲ್ಲೆಯ ಇತಿಹಾಸ ಪುಟದಲ್ಲಿ ನೆನಪಿಸುವಂತಹ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ಕೆ ಸತತ ಏಳು ವರ್ಷಗಳ ಪರಿಶ್ರಮವಿದೆ. ಯಾವದೇ ಫಲಾಪೇಕ್ಷೆ ಇಲ್ಲದೆ ಇಂತಹ ಪುಸ್ತಕವನ್ನು ಬರೆದಿರುವ ಇವರು ಈ ಸಂದರ್ಭದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿರುವದು ನಿಜಕ್ಕೂ ಶ್ಲಾಘನೀಯ ಎಂದರು. ಕೊಡವ ಭಾಷೆಯಲ್ಲಿ ಬರೆದಿರುವ ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸರವರ ಪುಸ್ತಕವನ್ನು ಪ್ರತಿ ಕುಟುಂಬವೂ ಓದುವ ಮೂಲಕ ವಿಷಯ ತಿಳಿದುಕೊಳ್ಳಬೇಕೆಂದು ಆಗಮಿಸಿದ ಭಕ್ತರಿಗೆ ಕರೆ ನೀಡಿದರು.

ಆಶ್ರಮದ ಹಿರಿಯ ಸ್ವಾಮೀಜಿ ಜಗದಾತ್ಮಾನಂದಾಜೀ ಮಹರಾಜ್ ಶಾಶ್ವತವಾದ ಪುಣ್ಯ ಕಾರ್ಯವನ್ನು ವ್ಯಕ್ತಿಯ ಅಭ್ಯುದಯ ಮತ್ತು ಸಮಾಜದ ಎಲ್ಲರ ಕಲ್ಯಾಣಕ್ಕೆ ಕಾರಣರಾದ ಭಗವಾನ್ ಶ್ರೀ ರಾಮಕೃಷ್ಣರ ದಿವ್ಯ ಮಂಗಳ ಚರಿತ್ರೆಯನ್ನು ಸರಳ ಸುಂದರ ಕೊಡವ ಭಾಷೆಯಲ್ಲಿ ಶ್ರಮ ವಹಿಸಿ ಬರೆದಿರುವ ಸುಂದರಿ ಮೇದಪ್ಪನವರ ಕಾರ್ಯವನ್ನು ಶ್ಲಾಘಿಸಿದರು.

ಕೊಡವ ಭಾಷೆಯಲ್ಲಿ ಪುಸ್ತಕ ಬರೆದ ಲೇಖಕಿ ಹೊಟ್ಟೇಂಗಡ ಸುಂದರಿ ಮೇದಪ್ಪ ಮಾತನಾಡಿ, ಪುಸ್ತಕ ಬರೆಯಲು ಸತತ ಏಳು ವರ್ಷಗಳ ಸಮಯ ಪಡೆದುಕೊಂಡಿದ್ದೇನೆ. ಪುಸ್ತಕ ಬಿಡುಗಡೆಗೆ ಧಾನಿಗಳು ಸಹಕರಿಸಿದ್ದಾರೆ. ಆರು ನೂರು ಪುಟಗಳುಳ್ಳ ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸರ ಈ ಪುಸ್ತಕ ಬಿಡುಗಡೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಆಶ್ರಮದ ವತಿಯಿಂದ ಸ್ವಾಮೀಜಿಗಳು, ಗಣ್ಯರು ಲೇಖಕಿ ಹೊಟ್ಟೇಂಗಡ ಸುಂದರಿ ಮೇದಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹರದಾಸ ಅಪ್ಪಚ್ಚುಕವಿಯ ಗೀತೆಯನ್ನು ಹಾಡುವ ಮೂಲಕ ವೈದ್ಯ ಡಾ.ಶಿವಪ್ಪ ನೆನಪಿಸಿಕೊಂಡರು. ಕಾರ್ಯಕ್ರಮವನ್ನು ಚಂದನ್ ಕಾಮತ್ ನಿರೂಪಿಸಿದರು.

-ಹೆಚ್.ಕೆ.ಜಗದೀಶ್