ಕುಶಾಲನಗರ, ಜು. 27: ಹಾರಂಗಿ ಬಲದಂಡೆ ನಾಲೆ 9ನೇ ತೂಬಿನ ವ್ಯಾಪ್ತಿಯಲ್ಲಿ ಹೂಳೆತ್ತದೆ ಕಾಲುವೆಗಳಿಗೆ ನೀರು ಬಿಟ್ಟ ಕಾರಣ ಭತ್ತದ ಗದ್ದೆಗಳಲ್ಲಿ ಬೆಳೆಗಳು ನಾಶಗೊಂಡ ಘಟನೆ ನಡೆದಿದೆ. ಯಾವದೇ ಮುನ್ಸೂಚನೆ ನೀಡದೆ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಏಕಾಏಕಿ ನೀರು ಹರಿಸಲಾದ ಕಾರಣ ಈ ಪರಿಸ್ಥಿತಿ ಉಂಟಾಗಿದೆ ಎಂದು ಅಲ್ಲಿನ ರೈತರು ದೂರಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳ ಹೂಳೆತ್ತದ ಕಾರಣ ನೀರು ಸಂಪೂರ್ಣ ಕೆಳಭಾಗದ ಗದ್ದೆಗಳಿಗೆ ತುಂಬಿದ್ದು ಇದರಿಂದ ಆಕ್ರೋಷಗೊಂಡ ರೈತರು ಅಣೆಕಟ್ಟು ವಿಭಾಗದ ಇಂಜಿನಿಯರ್ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಭಿಯಂತರರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಡೆಯಿತು. ಈ ಸಂದರ್ಭ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರ ಭರವಸೆ ಮೇರೆಗೆ ರೈತರು ಸಮಾಧಾನಗೊಂಡರು. ಗ್ರಾಮದ ಪ್ರಮುಖರಾದ ಚನ್ನಬಸಪ್ಪ, ಶಿವು, ರವಿ, ಗುರುಮಲ್ಲಪ್ಪ ಮತ್ತಿತರ ರೈತರು ಇದ್ದರು.