ಕುಶಾಲನಗರ, ಜು. 27: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2017-18ನೇ ಸಾಲಿನಲ್ಲಿ ರು 77,61,580 ಲಾಭಗಳಿಸಿ ಶೇ. 83 ರಷ್ಟು ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್ ತಿಳಿಸಿದರು. ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು 398 ಸದಸ್ಯರಿಂದ 2004 ರಲ್ಲಿ ಆರಂಭಗೊಂಡು ಸಂಘ ಮೊದಲನೇ ವರ್ಷವೇ 6,329 ಲಾಭವನ್ನು ಪಡೆದು ಸಾಲ ಮರುಪಾವತಿಯಲ್ಲಿ 98.50% ರಷ್ಟು ಸಾಧನೆ ತೋರಿತ್ತು.
ಕಳೆದ 14 ವರ್ಷದಲ್ಲಿ ಸಂಘವು ಕುಶಾಲನಗರ ವ್ಯಾಪ್ತಿಯೊಂದಿಗೆ ಸುಂಟಿಕೊಪ್ಪ ಹೋಬಳಿಯನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡು ಈ 2 ಹೋಬಳಿಗಳ ವ್ಯಾಪಾರ ಹಾಗೂ ಉದ್ದಿಮೆಗಳಿಗೆ ಸದಸ್ಯತ್ವವನ್ನು ನೀಡಿ ಅವರುಗಳ ಏಳಿಗೆಗಾಗಿ ದುಡಿಯುತ್ತಿದೆ.
ಪ್ರಸಕ್ತ ಸಂಘದಲ್ಲಿ 1083 ಸದಸ್ಯರಿದ್ದು ಠೇವಣಿ ವಿಭಾಗದಲ್ಲಿ ಒಟ್ಟು ರೂ 21,88,91,482 ಗಳಿದ್ದು ಕಳೆದ ವರ್ಷಕ್ಕಿಂತ ಶೇ. 54.55 ರಷ್ಟು ಪ್ರಗತಿ ಸಾಧಿಸಿದೆ. ಸಾಲ ವಿತರಣೆಯಲ್ಲಿ ರೂ. 28,58,15,389 ಶೇ. 47.35 ರಷ್ಟು ಹಿಂದಿನ ವರ್ಷಕ್ಕಿಂತ ಪ್ರಗತಿ ಸಾಧಿಸಿದೆ. ದುಡಿಯುವ ಬಂಡವಾಳವು ರೂ. 35,74,06,186 ಗಳಿದ್ದು ಶೇ. 51 ರಷ್ಟು ಪ್ರಗತಿ ಸಾಧಿಸಿದೆ. ಶೇ. 98.64 ರಷ್ಟು ಸಾಲದ ಮರುಪಾವತಿಯಾಗಿದ್ದು ಈ ವರ್ಷ ಸದಸ್ಯರಿಗೆ ಲಾಭದಲ್ಲಿ ಶೇ. 18 ರಷ್ಟು ಡಿವಿಡೆಂಡ್ ವಿತರಿಸಲು ಆಡಳಿತ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘವು ಸುಸಜ್ಜಿತವಾದ ಮೂರು ಅಂತಸ್ತಿನ ಉತ್ತಮ ದರ್ಜೆಯ ಹವಾ ನಿಯಂತ್ರಿತ ಸ್ವಂತ ಕಟ್ಟಡವನ್ನು ಹೊಂದಿದ್ದು ಆರ್.ಬಿ.ಐ ಮಾನದಂಡದಂತೆ ನಿರ್ಮಿಸಿರುವ ವಿಶಾಲವಾದ ಭದ್ರತಾ ಕೊಠಡಿಯೊಳಗೆ ಭದ್ರತಾ ಕಪಾಟುಗಳು ಅತ್ಯುತ್ತಮ ಭದ್ರತಾ ವ್ಯವಸ್ಥೆಗಳೊಂದಿಗೆ ವೈಬ್ರೆಂಟಿಗ್ ಹಾಗೂ ಮೊಷನ್ ಸೆನ್ಸಾರ್, ಆಲರಾಮ್ ಸಿಸ್ಟಂಮ್ ಗಳು, 24x7 ಸಿಸಿ ಟಿವಿ ಕಣ್ಗಾವಲಿನಲ್ಲಿರುತ್ತದೆ ಮತ್ತು ಸ್ವಯಂ ಚಾಲಿತ ನಗದು ನಿರ್ವಹಣಾ ಯಂತ್ರವನ್ನು ಹೊಂದಿದ್ದು ಗ್ರಾಹಕರು ತ್ವರಿತವಾಗಿ ಹಣ ಪಡೆಯಲು ತಮ್ಮ ಖಾತೆಗಳಿಗೆ ಹಣ ಪಾವತಿಸಲು ಮತ್ತು ಅವರ ಸಾಲಗಳಿಗೆ ಹಣ ಸಂದಾಯ ಮಾಡಲು 24x7 ಅವಧಿಯಲ್ಲಿ ಸದಾ ಸೇವೆಯಲ್ಲಿ ಇರಲು ಸೌಲಭ್ಯ ಒದಗಿಸಲಾಗಿದೆ.
ಸಂಘವು ಸದಸ್ಯರಿಗೆ ಅನುಕೂಲಕ್ಕಾಗಿ ವ್ಯಾಪಾರಾಭಿವೃದ್ಧಿ ಸಾಲ, ಜಾಮೀನು ಸಾಲ, ಪಿಗ್ಮಿ ಸಾಮಾನ್ಯ ಸಾಲ, ಮೀರಳತೆ ಸಾಲ, ಆಭರಣ ಸಾಲ, ವಾಹನ ಸಾಲ, ಇತ್ತೀಚೆಗೆ ಗೃಹ ನಿರ್ಮಾಣ ಸಾಲ ವಿತರಿಸುತ್ತಾ ಬಂದಿರುತ್ತದೆ. ಹಾಗೂ 2017-2018ರಲ್ಲಿ ಚಿಟ್ ಫಂಡ್ 7.5 ಲಕ್ಷ, 6 ಲಕ್ಷದ ಎರಡು ಗುಂಪು, 3 ಲಕ್ಷದ ಎರಡು ಗುಂಪು ಹಾಗೂ 4.5 ಲಕ್ಷದ ಎರಡು ಚಿಟ್ ಫಂಡ್ ಗುಂಪುಗಳನ್ನು ನಡೆಸುತ್ತಿದೆ.
ಸಂಘವು ಹೂಡಿಕೆದಾರರಿಗೆ ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ದರವನ್ನು ನೀಡುತ್ತಿದ್ದು ನಿತ್ಯನಿಧಿ, ಠೇವಣಿ, ಆರ್‍ಡಿ, ನಿತ್ಯನಿಧಿ ಠೇವಣಿ ಮೇಲೆ ಶೇ. 80 ರಷ್ಟು ಸಾಲವನ್ನು ಸದಸ್ಯರಿಗೆ ವಿತರಿಸಲಾಗುವದು ಎಂದರು.
ತಾ. 29 ರಂದು ಸಂಘದ ಮಹಾಸಭೆ ಸ್ಥಳೀಯ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಸಂಘದ ಕಾರ್ಯವ್ಯಾಪ್ತಿಯನ್ನು ನೆರೆಯ ಪಿರಿಯಾಪಟ್ಟಣ ಹಾಗೂ ಸೋಮವಾರಪೇಟೆ ತಾಲೂಕಿಗೆ ವಿಸ್ತರಿಸಲಾಗಿದ್ದು ಅಸಂಘಟಿತ ವ್ಯಾಪಾರಿಗಳಿಗೆ ಗುಂಪು ಸಾಲ ವಿತರಣೆ ಚಿಂತನೆ ಹರಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಎನ್.ಇ. ಶಿವಪ್ರಕಾಶ್, ಎನ್.ಕೆ. ಮೋಹನ್‍ಕುಮಾರ್, ಕೆ.ಎಸ್. ಮಹೇಶ್, ಕವಿತ ಮೋಹನ್, ಸಹ ನಿರ್ದೇಶಕ ಗುರುಮಲ್ಲಪ್ಪ, ವ್ಯವಸ್ಥಾಪಕ ಶ್ರೀಜೇಶ್ ಇದ್ದರು.