ಮಡಿಕೇರಿ, ಜು.27 : ಭಾಗಮಂಡಲದ ಕಾವೇರಿ ವಿದ್ಯಾಸಂಸ್ಥೆಗೆ ಸೇರಿದ ಎಲ್ಲ ಆಸ್ತಿಯನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಅಧೀನಕ್ಕೆ ಹಸ್ತಾಂತರಿಸುವದಕ್ಕೆ ಸಂಸ್ಥೆಯ ಹಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ವಿದ್ಯಾಸಂಘದ ಸದಸ್ಯ ಕುದುಕುಳಿ ಭರತ್, ದಾನಿಗಳು ಹಾಗೂ ಸರ್ಕಾರ ನೀಡಿದ ಜಾಗ ಸೇರಿದಂತೆ ಸಂಸ್ಥೆಯ ವಶದಲ್ಲಿ 16.50 ಏಕರೆ ಜಾಗವಿದೆ. ಈ ಜಾಗದೊಂದಿಗೆ ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿಸುವದು ಸಮರ್ಪಕವಲ್ಲ. ಹಸ್ತಾಂತರಿಸುವ ಅಭಿಲಾಷೆ ಇದ್ದಲ್ಲಿ 6.50 ಏಕರೆ ಜಾಗವನ್ನು ಮಾತ್ರ ಹಸ್ತಾಂತರಿಸಲಿ ಎಂದು ಸಲಹೆ ನೀಡಿದರು.
ಪ್ರಸ್ತುತ ಕಾವೇರಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಿಂದ ಪಿಯುಸಿಯವರೆಗೆ 220 ರಿಂದ 230 ವಿದ್ಯಾರ್ಥಿಗಳಿದ್ದು, ಶಿಕ್ಷಣ ಸಂಸ್ಥೆಯನ್ನು ನಡೆಸಲಾಗದ ಪರಿಸ್ಥಿತಿಗಳೇನು ಉದ್ಭವಿಸಿಲ್ಲ. ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ಹಸ್ತಾಂತರಿಸುವದಕ್ಕೆ ಸಂಬಂಧಿಸಿದಂತೆ ಮಹಾಸಭೆಯನ್ನು ಕರೆದು, ಎಲ್ಲ ಸದಸ್ಯರುಗಳ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ, ಇಂತಹ ಪ್ರಯತ್ನ ಮಾಡದೆ ಆಡಳಿತ ಮಂಡಳಿಯೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ತಾ. 12 ರಂದು ಆಡಳಿತ ಮಂಡಳಿ ನಡೆಸಿದ ವಿಶೇಷ ಮಹಾಸಭೆಯಲ್ಲಿ ಸ್ಥಳ ದಾನಿಗಳನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತÀಪಡಿಸಿದರು. ಅಂದಿನ ಸಭೆಯಲ್ಲಿ ಶಿಕ್ಷಣ ಸಂಸ್ಥೆಗೆ ಸೇರಿದ ಎಲ್ಲಾ ಜಮೀನನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನಕ್ಕೆ ಸಲ್ಲಿಸದೆ ಜಾಗವನ್ನು ತಮ್ಮ ವಶದಲ್ಲೇ ಇರಿಸಿಕೊಳ್ಳಬೇಕೆಂದು ಸಾಕಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು. ಆದರೆ, ಈ ವಿಚಾರವನ್ನು ನಿರ್ಣಯದಲ್ಲಿ ದಾಖಲಿಸಿಲ್ಲವೆಂದು ಭರತ್ ಆರೋಪಿಸಿದರು.
ಶಿಕ್ಷಣ ಸಂಸ್ಥೆಯ ಆರಂಭಕ್ಕೆ ಸಹಕಾರಿಯಾಗುವಂತೆ ಜಾಗದಾನ ಮಾಡಿದ ಹೊಸಗದ್ದೆ ಕುಟುಂಬದ ಭಾಸ್ಕರ್ ಅವರು ಮಾತನಾಡಿ, 1959ರಲ್ಲಿ ಭಾಗಮಂಡಲ ಶ್ರೀ ಕಾವೇರಿ ವಿದ್ಯಾ ಸಂಸ್ಥೆ ಪ್ರಾರಂಭವಾಗಿ ದಿ. ನಂಗಾರು ಮುತ್ತಣ್ಣ ಮತ್ತು ದಿ. ಕೆದಂಬಾಡಿ ಗಣಪತಿ ಹಾಗೂ ಅಂದಿನ ಕಾಲದ ನೂರಾರು ಗಣ್ಯರುಗಳ ಸಹಕಾರದಿಂದ ಈ ವಿದ್ಯಾ ಸಂಸ್ಥೆ ತಲೆ ಎತ್ತಿ ನಿಲ್ಲುವಂತಾಗಿದೆ. ಹೊಸಗದ್ದೆ ಮತ್ತು ಚೆದುಕಾರು ಕುಟುಂಬಸ್ಥರು ಸೇರಿ ಒಟ್ಟಾಗಿ 5 ಎಕ್ರೆ ಜಾಗವನ್ನು ವಿದ್ಯಾ ಸಂಸ್ಥೆಗಾಗಿ ದಾನವಾಗಿ ನೀಡಿದ್ದಾರೆ. ಹೀಗೆ ದಾನಕೊಟ್ಟ ಜಾಗವನ್ನು ಮಠಕ್ಕೆ ಹಸ್ತಾಂತರಿಸುವದಕ್ಕೆ ದಾನಿಗಳ ಕುಟುಂಬದ ವಿರೋಧವೂ ಇದೆ ಎಂದರು.
ಶಿಕ್ಷಣ ಸಂಸ್ಥೆಯ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸುವ ವಿಚಾರವನ್ನು ವಾಟ್ಸಪ್ ಮೂಲಕ ಪ್ರಸ್ತಾಪಿಸಿದ ವಕೀಲ ಭಾನು ಪ್ರಕಾಶ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಭಾಸ್ಕರ್ ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಾನಿಗಳಾದ ಕೆದಂಬಾಡಿ ಬೆಳ್ಯಪ್ಪ ಹಾಗೂ ಶಿಕ್ಷಣ ಸಂಸ್ಥೆಯ ಸದಸ್ಯ ರಾಜೀವ್ ಉಪಸ್ಥಿತರಿದ್ದರು.