ಮಡಿಕೇರಿ, ಜು.27: ಹನ್ನೆರಡೆನೇ ಶತಮಾನದ ಅನುಭವ ಮಂಟಪವು ಸಂಸತ್ತಿನಂತೆ ಕಾರ್ಯನಿರ್ವಹಿಸಿ, ಪ್ರಜಾಪ್ರಭುತ್ವದ ಬುನಾದಿಯನ್ನು ಹಾಕಿಕೊಟ್ಟಿತು; ಆ ಸಂದರ್ಭದಲ್ಲಿಯೇ ಹಡಪದ ಅಪ್ಪಣ್ಣನವರು ಬಸವಣ್ಣ ಅವರ ಜೊತೆಗಿದ್ದು, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಡಪದ ಅಪ್ಪಣ್ಣನಂತಹ ಹಲವಾರು ಸಂತ ಶರಣರು ದೇಶಕ್ಕೆ ಹಿರಿಮೆ ತಂದಿದ್ದು, ಭಾರತದ ಸಂಸ್ಕøತಿ, ಜ್ಞಾನ, ಸಮಾಜ ಸುಧಾರಣೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಇಂತಹ ಮಹನೀಯರ ತತ್ವ ಸಿದ್ಧ್ಧಾಂತಗಳನ್ನು ಎಲ್ಲರೂ ಮೈಗೂಡಿಸಿ ಕೊಳ್ಳುವಂತಾಗಬೇಕು ಎಂದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಜೊತೆಯಲ್ಲಿ ಮೊದಲಿನಿಂದ ಕೊನೆಯವರೆಗೆ ಎಡಬಿಡದೆ ಇದ್ದ ಕೀರ್ತಿಯು ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ. ಈ ಅಪ್ಪಣ್ಣ ಬಸವಣ್ಣನವರ ಆಪ್ತನಾಗಿ, ಆಪ್ತ ಸೇವಕನಾಗಿ, ಆಪ್ತ ಒಡನಾಡಿಯಾಗಿ, ಆಪ್ತ ಬಂಧುವಾಗಿ, ಕಟ್ಟಕಡೆಯವರೆಗೂ ಮನಃಪೂರ್ವಕ ವಾದ ಸೇವೆ ಸಲ್ಲಿಸಿದ್ದರು. ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಅಪ್ಪಣ್ಣನವರು ಬಸವಣ್ಣನವರಿಗೆ ತುಂಬಾ ಸಹಾಯಕರಾಗಿದ್ದರು. ಗುರುವಿನ ಜೊತೆಯಲ್ಲಿಯೇ ಐಕ್ಯರಾದ ಇವರು ಜಾತಿ ಪದ್ಧತಿ ನಿರ್ಮೂಲನೆಗೆ ಬಸವಣ್ಣನವರ ಜೊತೆಯಲ್ಲಿ ಶ್ರಮಿಸಿದ ಮಹಾನ್ ಪುರುಷ ಹಡಪದ ಅಪ್ಪಣ್ಣನವರು ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ನುಡಿದರು.

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಹಡಪದ ಅಪ್ಪಣ್ಣನವರಿಗೆ ಬಸವಣ್ಣನವರ ಸೇವಾ ವೃತ್ತಿಯೇ ಒಂದು ಕಾಯಕವಾಗಿತ್ತು. ಈ ಕಾಯಕವನ್ನು ಕೈಗೊಂಡಿದ್ದ ಅವರಿಗೆ ಆಗಿನ ಶರಣ ಸಮೂಹದಲ್ಲಿ ಉನ್ನತ ಸ್ಥಾನಗಳಿದ್ದವು. ಅವರು ಲೌಕಿಕ ವಿಚಾರದಲ್ಲಿ ಚಾಣಾಕ್ಷ ರಾಗಿದ್ದಂತೆಯೇ, ಪಾರಮಾರ್ಥಿಕ ವಿಚಾರಗಳಲ್ಲಿಯೂ ಒಳ್ಳೆಯ ಜ್ಞಾನ ಹೊಂದಿದ್ದರು. ಎಲ್ಲವನ್ನೂ ಅರಗಿಸಿ ಕೊಂಡು ಅದನ್ನು ಆಚರಣೆಯಲ್ಲಿ ತಂದುಕೊಂಡು ಲೌಕಿಕ ಪಾರಮಾರ್ಥಿಕಗಳೆರಡನ್ನೂ ಸುಖ ಮುಖವಾಗಿ ಎಡುರು ತೊಡುರು ಗಳಿಲ್ಲದೇ ಲೀಲಾಜಾಲ ವಾಗಿ ನಡೆಸಿಕೊಂಡು ಹೋಗುತ್ತಿದ್ದರು ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು ಮಾತನಾಡಿ, 800 ವರ್ಷಗಳ ಹಿಂದೆ ಬಸವಣ್ಣನವರ ಅತ್ಯಾಪ್ತರಾಗಿ ಜಾತಿ ವ್ಯವಸ್ಥೆಯ ವಿರುದ್ಧ ಸಮಾಜ ಸುಧಾರಣೆಯಲ್ಲಿ ಶ್ರಮಿಸಿದ ಮಹಾನ್ ಶರಣ ಹಡಪದ ಅಪ್ಪಣ್ಣ ಇಂತಹ ಮಹಾನ್ ಶರಣರ ಜಯಂತಿಯು ಕೇವಲ ಒಂದು ಸಮಾಜಕ್ಕೆ ಮೀಸಲಾಗದೆ ಎಲ್ಲಾ ಸಮಾಜದವರು ಸೇರಿ ಆಚರಿಸುವಂತಾಗಬೇಕು ಎಂದರು.

ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಶ್ರೀಕುಮಾರ್ ಅವರು ಮಾತನಾಡಿ ಹಡಪದ ಅಪ್ಪಣ್ಣನವರು 12 ನೇ ಶತಮಾನದ ಕ್ರಾಂತಿಕಾರಿ ಮಹಾತ್ಮ ಪುರುಷರು. ಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷÀ ವೆಂಕಟೇಶ್ ಎಚ್.ಎನ್, ವೃತ್ತ ನಿರೀಕ್ಷಕ ಐ.ಪಿ ಮೇದಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಬಾಬು, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಮಣಜೂರು ಮಂಜುನಾಥ್, ಶಂಕ್ರಯ್ಯ ಇತರರು ಪಾಲ್ಗೊಂಡಿದ್ದರು.