ಮಡಿಕೇರಿ, ಜು. 27: ಕಳೆದ ಒಂದು ದಶಕದಿಂದ ನಗರದ ಸುದರ್ಶನ ವೃತ್ತ ಬಳಿ ನಡೆಯುತ್ತಿರುವ ಸರಕಾರಿ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಬವಣೆ ಪಡುತ್ತಿರುವ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕೋರಿಕೆ ಮೇರೆಗೆ ಜಿಲ್ಲಾಧಿಕಾರಿಗಳು 2 ಎಕರೆ ಜಾಗ ಮಂಜೂರುಗೊಳಿಸಿದ್ದಾರೆ. ಅಲ್ಲದೆ, ಇಲ್ಲಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೂ ಜಾಗ ಮಂಜೂರಾತಿಗೆ ಕ್ರಮ ಕೈಗೊಂಡಿದ್ದಾರೆ.ಈ ಸಂಬಂಧ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಇಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರನ್ನು ಕಾಲೇಜಿನ ನಿಯೋಗದೊಂದಿಗೆ ಖುದ್ದು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದರು. ಸರಕಾರದಿಂದ ಕಾಲೇಜು ಮಂಜೂರಾಗಿ ಹತ್ತು ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲದೆ ತಾತ್ಕಾಲಿಕವಾಗಿ ಜಿಲ್ಲಾ ಯುವ ಭವನದಲ್ಲಿ ಮಹಿಳಾ ಕಾಲೇಜು ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.ಅಲ್ಲದೆ, ಕೊಡಗು ಯುವ ಒಕ್ಕೂಟದಿಂದ ಮಹಿಳಾ ಕಾಲೇಜು ತೆರವುಗೊಳಿಸಿ, ಕಟ್ಟಡವನ್ನು ಹಿಂತಿರುಗಿಸುವಂತೆ ಸಾಕಷ್ಟು ಒತ್ತಡವಿರುವ ಕಾರಣ; ಕಾಲೇಜಿಗೆ ಜಾಗ ಮಂಜೂರಾತಿಯೊಂದಿಗೆ ಸ್ವಂತ ಕಟ್ಟಡ ನಿರ್ಮಿಸಲು ಬೇಡಿಕೆ ಸಲ್ಲಿಸಿದ್ದು, ಆ ಮೇರೆಗೆ ಮಡಿಕೇರಿ ಕರ್ಣಂಗೇರಿ ಗ್ರಾಮದ ಸರ್ವೆ ನಂ. 471/1ಪಿ16 ರಲ್ಲಿ ಗುರುತಿಸಲಾಗಿದೆ. ಈ ನಿವೇಶನದಲ್ಲಿ 2 ಎಕರೆಯನ್ನು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಹೆಸರಿಗೆ ಭೂ ಕಂದಾಯ ಕಾಯ್ದೆ 1964ರ ಕಲಂ71ರ ಅನ್ವಯ ಕಾಯ್ದಿರಿಸಲಾಗಿದೆ.
ಈ ಬಗ್ಗೆ ತಾ. 11.8.2017 ರಂದು ಹಿಂದಿನ ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ಕ್ರಮ ಕೈಗೊಂಡಿದ್ದರೂ, ಸಂಬಂಧಿಸಿದ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ವಿಳಂಬ ಅನುಸರಿಸುತ್ತಿದ್ದ ಬಗ್ಗೆ, ಶಾಸಕರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರೊಂದಿಗೆ ಇಂದು ಮಾತುಕತೆ ನಡೆಸಿದರು. ಅಲ್ಲದೆ ಈಗಾಗಲೇ ನಿರ್ಮಿತಿ ಕೇಂದ್ರದಿಂದ ನೀಲ ನಕಾಶೆ ಸಿದ್ಧಗೊಳಿಸಿರುವ ಬಗ್ಗೆ ಪ್ರಸ್ತಾಪಿಸಿದರು.
ಮಹಿಳಾ ಕಾಲೇಜಿಗೆ ಸಂಬಂಧಿಸಿದಂತೆ ರೂ. 2 ಕೋಟಿ ಹಣವಿದ್ದು, ಈ ಹಣದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶೀಘ್ರ ಟೆಂಡರ್ ಪ್ರಕ್ರಿಯೆ ಕೈಗೊಂಡು ತುರ್ತಾಗಿ ಕಾಲೇಜು ಕಟ್ಟಡ ನಿರ್ಮಿಸುವಂತೆ ಶಾಸಕ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಜಿಲ್ಲಾಧಿಕಾರಿಗಳಿಗೆ ಗಮನ ಸೆಳೆಯುತ್ತಾ, ಪ್ರಸಕ್ತ ಕಟ್ಟಡ ಮಳೆಯಿಂದ ಸೋರುವದರೊಂದಿಗೆ ಕಿಷ್ಕಿಂದೆಯಲ್ಲಿ ವಿದ್ಯಾರ್ಥಿನಿಯರಿಗೆ ಪಾಠ ಪ್ರವಚÀನ ನಡೆಸುವಂತಾಗಿದೆ ಎಂದು ಅಳಲು ತೋಡಿಕೊಂಡರು. ಅಲ್ಲದೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆಯೂ ಪ್ರಸ್ತಾಪಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಪ್ರತಿಕ್ರಿಯಿಸಿ ಆದಷ್ಟು ಬೇಗ ಹೊಸ ಕಟ್ಟಡ ಕಾಮಗಾರಿ ಕೈಗೊಂಡು ಈಗಿರುವ ಕಟ್ಟಡದಿಂದ ಸ್ಥಳಾಂತರಿಸಲು ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಈಗಾಗಲೇ ಕಾಲೇಜು ಶಿಕ್ಷಣ ಮಂಡಳಿ ಬಿಡುಗಡೆಗೊಳಿಸಿರುವ ರೂ. 2 ಕೋಟಿಯಲ್ಲಿ ಲೋಕೋಪಯೋಗಿ ಇಲಾಖೆ ಕೆಲಸ ನಿರ್ವಹಿಸುವಂತೆ ಮಾರ್ನುಡಿದರು.
ಪ್ರಥಮ ದರ್ಜೆ ಕಾಲೇಜು : ಅಲ್ಲದೆ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಕರ್ಣಂಗೇರಿ ಗ್ರಾಮದಲ್ಲಿ ಈಗಾಗಲೇ 5 ಎಕರೆ ಜಾಗವನ್ನು ಗುರುತಿಸಿದ್ದು, ಕಾಲೇಜು ಆಡಳಿತದಿಂದ ಸೂಕ್ತ ದಾಖಲೆಗಳನ್ನು ರೂಪಿಸಿಕೊಂಡಿಲ್ಲವೆಂದು ಶಾಸಕರು ಹಾಗೂ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಾಂಶುಪಾಲರು ಹಾಗೂ ಕಾಲೇಜು ಸಿಬ್ಬಂದಿ ಶೀಘ್ರ ಗಮನ ಹರಿಸಿ ಅಗತ್ಯ ದಾಖಲೆಗಳನ್ನು ಹೊಂದಿಕೊಳ್ಳುವಂತೆ ಉಭಯತ್ರಯರು ಸಂಬಂಧಿಸಿದವರಿಗೆ ನಿರ್ದೇಶಿಸಿದರು. ಅಲ್ಲದೆ ಈ ಹಿಂದೆ ಮಕ್ಕಂದೂರು ಬಳಿ ಜಾಗ ಗುರುತಿಸಿದ್ದು, ಅದು ನಗರದ ಹೊರವಲಯದಿಂದ ನಾಲ್ಕಾರು ಕಿ.ಮೀ. ದೂರವಿರುವ ಕಾರಣ ಬದಲಿ ಜಾಗ ಕೋರಿದ್ದಾಗಿ ಶಾಸಕರು ಮನವರಿಕೆ ಮಾಡಿಕೊಟ್ಟರು. ಆ ಮೇರೆಗೆ ರಾಜರಾಜೇಶ್ವರಿ ನಗರದಲ್ಲಿ ಈಗಾಗಲೇ ಸುಮಾರು 10 ಎಕರೆ ಸರಕಾರಿ ಜಾಗ ಗುರುತಿಸಿದ್ದು, ಕಾಲೇಜಿಗೆ ಅವಶ್ಯವಿರುವಷ್ಟು ಮಂಜೂರು ಗೊಳಿಸಲಾಗುವದು ಎಂದು ಶ್ರೀವಿದ್ಯಾ ಭರವಸೆ ನೀಡಿದರು.
‘‘ಶಕ್ತಿ’’ಯ ಹಿತೈಷಿ ಗಿರೀಶ್‍ಕಾಂತ್ ಪರಪ್ಪು ಮಡಿಕೇರಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮರಗೋಡು ಸಮೀಪದ ವಾಟೆಕಾಡು ಮನೆಗೆ ಹೋಗುವಾಗ ಆಯಾ ದಿನದ ‘ಶಕ್ತಿ’ಯನ್ನು ಕೊಂಡೊಯ್ಯುತ್ತಾರೆ.
ದಶಕಗಳಿಂದ ‘ಶಕ್ತಿ’ ಓದುವ ಅವರ ಅಮ್ಮ ರುಕ್ಮಿಣಿ ಮಗನ ಹಾಗೂ ‘ಶಕ್ತಿ’ಯ ಆಗಮನಕ್ಕೆ ಹಾತೊರೆಯುತ್ತಿರುತ್ತಾರೆ.
ಮಳೆಯಿಂದಾಗಿ ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೂ, ಮನದಲ್ಲಿ ಹರಿಯುವ ಅಭಿಮಾನಕ್ಕೆ ‘ಶಕ್ತಿ’ ಓದಲು ಟಾರ್ಚ್ ನೆರವು ನೀಡುತ್ತದೆ.
ಪತ್ರಿಕೆಯತ್ತ ಬೆಳಕು ಹಾಯಿಸಿ, ಕನ್ನಡಕ ಏರಿಸಿ ಸುದ್ದಿಯತ್ತ ‘‘ಅಮ್ಮ’’ನ ನೋಟ ಹರಿಯುತ್ತದೆ.
‘‘ಶಕ್ತಿ’’ಗೆ ಇಂತಹಾ ಓದುಗರೇ ಬೆಳಕು.
ಆ ‘‘ಅಮ್ಮ’’ನಿಗೊಂದು ನಮನ.
-ಸಂಪಾದಕ.