ಗೋಣಿಕೊಪ್ಪ ವರದಿ, ಜು. 27: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಮೊದಲ ವರ್ಷದ ಓಣಂ ಆಚರಣೆ ಸೆಪ್ಟೆಂಬರ್ 2 ರಂದು ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ನಡೆಯಲಿದೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್ ತಿಳಿಸಿದ್ದಾರೆ.

ಕೊಡಗಿನಲ್ಲಿರುವ ಎಸ್‍ಎನ್‍ಡಿಪಿ, ಕೆಎನ್‍ಎನ್‍ಎಸ್ ಹಾಗೂ ವಿಶ್ವಕರ್ಮ ಸಮಾಜಗಳನ್ನು ಒಂದುಗೂಡಿಸಿ ಮಲಯಾಳಿ ಸಮಾಜ ರಚಿಸಲಾಗಿದೆ. ಇದರಂತೆ ಎಲ್ಲಾರನ್ನೂ ಒಂದುಗೂಡಿಸಿ ಓಣಂ ಆಚರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಲಯಾಳಿ ಜನಾಂಗದ ಕಲೆ, ಸಂಸ್ಕøತಿ ಬಿಂಬಿಸುವದು, ಸಾಧಕ ವಿದ್ಯಾರ್ಥಿ ಹಾಗೂ ಕ್ರೀಡಾಪಟುಗಳನ್ನು ಗುರುತಿಸುವದು ಆಚರಣೆಯ ಉದ್ದೇಶವಾಗಿದೆ. ಇದರಂತೆ ಹಲವು ಕಾರ್ಯಕ್ರಮಗಳನ್ನು ಅಂದು ನಡೆಸಲಾಗುತ್ತದೆ ಎಂದರು.

ಅಂದು ಬೆಳಿಗ್ಗೆ 9 ಕ್ಕೆ ಗೋಣಿಕೊಪ್ಪ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪರಿಮಳ ಮಂಗಳ ವಿಹಾರದವರೆಗೆ ಸಾಂಸ್ಕøತಿಕ ಮೆರವಣಿಗೆ ನಡೆಸಲಾಗುವದು. ಈ ಸಂದರ್ಭ ಕೇರಳ ಶೈಲಿಯ ಮಾವೇಲಿ ನೃತ್ಯ, ಕತಕಲಿ, ಹುಲಿವೇಷ, ಸಿಂಗಾರಿ ಮೇಳ ಪಾಲ್ಗೊಳ್ಳಲಿದೆ. ಕೇರಳ ಶೈಲಿಯ ಉಡುಗೆ ತೊಡುಗೆ ತೊಟ್ಟು ಮೆರವಣಿಗೆಗೆ ಸಾಂಸ್ಕøತಿಕ ಮೆರಗು ನೀಡಲಾಗುತ್ತದೆ ಎಂದರು. ಬೆ. 11 ಕ್ಕೆ ಸಭಾ ಕಾರ್ಯಕ್ರಮ ನಡೆಸಿ, ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತದೆ. ಎಸೆಸೆಲ್ಸಿ, ಪಿಯುಸಿಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡು ಪ್ರತ್ಯೇಕ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ಕಾರ್ಯಕ್ರಮ ನಡೆಯುತ್ತದೆ ಎಂದರು.

ಈಗಾಗಲೇ 500 ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿದ್ದು, ಎಲ್ಲಾರನ್ನೂ ಒಂದುಗೂಡಿಸಿ ಒಗ್ಗಟ್ಟು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೊದಲನೇ ವರ್ಷದ ಆಚರಣೆಯಲ್ಲಿ ಜನಾಂಗ ಬಾಂಧವರು ಹೆಚ್ಚು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ವಿಮಲಾ ರಾಜಮಣಿ, ಕಾರ್ಯದರ್ಶಿ ಟೀನಾ ಉಮೇಶ್, ನಿರ್ದೇಶಕ ಅಖಿಲ್, ಸಮಾಜದ ಪಾಲಿಬೆಟ್ಟ ಸಮಿತಿ ಅಧ್ಯಕ್ಷ ರಿನೇಶ್ ಉಪಸ್ಥಿತರಿದ್ದರು.