ಕೂಡಿಗೆ, ಜು. 27: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾ.ಪಂ. ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಲತಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಉಪಾಧ್ಯಕ್ಷೆ ಪದ್ಮ ಸೇರಿದಂತೆ ಐದು ಜನ ಸದಸ್ಯರು ಕಳೆದ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದ ಗ್ರಾ.ಪಂ. ವ್ಯಾಪ್ತಿಯ ಐದು ಮಳಿಗೆಗಳ ಹರಾಜು ಪ್ರಕ್ರಿಯೆಗೆ ಪರ-ವಿರುದ್ಧವಾದ ಚರ್ಚೆಗಳು ನಡೆದವು. ಹರಾಜು ಪ್ರಕ್ರಿಯೆಯ ಬಗ್ಗೆ ಕಳೆದ ಮಾಸಿಕ ಸಭೆಯಲ್ಲಿ ಹರಾಜು ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಅಧ್ಯಕ್ಷೆ ಲತಾ ಅವರು ವಿಶೇಷ ತುರ್ತು ಸಭೆಯನ್ನು ಕರೆದು ಮಾಸಿಕ ಸಭೆಯ ನಡವಳಿಕೆಯನ್ನು ರದ್ದುಗೊಳಿಸಿದ ಹಿನ್ನೆಲೆ ಏಳು ಜನ ಸದಸ್ಯರ ಸಹಿ ಒಳಗೊಂಡಂತೆ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗಳನ್ನು ಪರಿಶೀಲಸಿದ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ ಮೇರೆಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರು ಏಳು ಮಳಿಗೆಗಳನ್ನು ಹರಾಜು ಮಾಡಲು ಆದೇಶ ನೀಡಿದ್ದರು. ಈ ಆದೇಶದ ಪ್ರಕಾರ ಗ್ರಾ.ಪಂ.ಯ ಅಭಿವೃದ್ಧಿ ಅಧಿಕಾರಿಯು ಮಾಸಿಕ ಸಭೆಯಲ್ಲಿ ಆದೇಶದ ವಿಷಯವನ್ನು ಸದಸ್ಯರ ಗಮನಕ್ಕೆ ತಂದರೂ ಅಧ್ಯಕ್ಷರು ಒಳಗೊಂಡಂತೆ ಐದು ಸದಸ್ಯರು ಇದನ್ನು ವಿರೋಧಿಸಿದರು. ಪರ-ವಿರುದ್ಧವಾದ ಚರ್ಚೆಗಳು ನಡೆದು ಕೊನೆಯಲ್ಲಿ ಗ್ರಾ.ಪಂ.ಗೆ ಒಳಪಡುವ 19 ಮಳಿಗೆಗಳನ್ನು ಹಂತಹಂತವಾಗಿ ಹರಾಜು ಮಾಡುವಂತೆ ತೀರ್ಮಾನಿಸಲಾಯಿತು. ಆದರೆ ಮೇಲಧಿಕಾರಿಗಳ ಆದೇಶಕ್ಕೆ ಮನ್ನಣೆ ದೊರೆಯಲಿಲ್ಲ. ಸಭೆಯಲ್ಲಿ ಹೆಬ್ಬಾಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಕೇಶ್, ಸದಸ್ಯರು ಉಪಸ್ಥಿತರಿದ್ದರು.