ಮಡಿಕೇರಿ, ಜು. 28: ಕೊಡಗು ಜಿಲ್ಲೆಗೆ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 100.77 ಇಂಚು ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಇಳಿಮುಖಗೊಂಡಿರುವ ಮಳೆಯು ಸರಾಸರಿ 0.31 ಇಂಚು ಮಾತ್ರ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 47.77 ಇಂಚು ಮಳೆಯಾಗಿದೆ.
ಈ ವರ್ಷಾರಂಭದಿಂದ 53 ಇಂಚು ಅಧಿಕ ಮಳೆಯಾಗಿದೆ. ಈ ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 141 ಇಂಚು ಮಳೆ ಸುರಿದಿದೆ. ಹಿಂದಿನ ಸಾಲಿನಲ್ಲಿ ಈ ವೇಳೆಗೆ 65.33 ಇಂಚು ದಾಖಲಾಗಿತ್ತು. ಹಿಂದಿನ 24 ಗಂಟೆಗಳಲ್ಲಿ ಕೇವಲ 0.34 ಇಂಚು ಮಳೆ ಬಿದ್ದಿದೆ. ವೀರಾಜಪೇಟೆ ತಾಲೂಕಿಗೆ ಸರಾಸರಿ 0.30 ಇಂಚು ಮಳೆಯಾದರೆ ವರ್ಷಾರಂಭದಿಂದ ಇದುವರೆಗೆ 81.22 ಇಂಚು ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ ತಾಲೂಕಿನಲ್ಲಿ ಸರಾಸರಿ 40.69 ಇಂಚು ಮಳೆಯಾಗಿತ್ತು.
ಅತ್ತ ಸೋಮವಾರಪೇಟೆ ತಾಲೂಕಿನಾದ್ಯಂತ ಈ ಅವಧಿಗೆ 79.88 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೇವಲ 37.30 ಇಂಚು ಮಳೆ ದಾಖಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಕೊಡಗಿನ ತಲಕಾವೇರಿ ಹಾಗೂ ಭಾಗಮಂಡಲ, ಸೂರ್ಲಬ್ಬಿ, ಶಾಂತಳ್ಳಿ, ಶ್ರೀಮಂಗಲ, ಹುದಿಕೇರಿ, ಸಂಪಾಜೆ ಹೋಬಳಿಗಳಲ್ಲಿ ಅತ್ಯಧಿಕ ಮಳೆಯಾಗಿದೆ.