ಸಿದ್ದಾಪುರ, ಜು. 28: ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ಮೇಲೆ ಕಾಡಾನೆಯ ಹಿಂಡು ಧಾಳಿ ಮಾಡಿದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡು ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಬಜೆಗೊಲ್ಲಿಯಲ್ಲಿ ನಡೆದಿದೆ.
ಬಜೆಗೊಲ್ಲಿಯಿಂದ ಮುಹಮ್ಮದ್ ಎಂಬವರು ತಮ್ಮ ಆಟೋದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಸಿದ್ದಾಪುರ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ಆಲತೋಪು ಎಂಬಲ್ಲಿ ಕಾಡಾನೆಯ ಹಿಂಡು ದಿಢೀರ್ ಪ್ರತ್ಯಕ್ಷಗೊಂಡಿದೆ. ಕಾಡಾನೆಯ ಹಿಂಡನ್ನು ಕಂಡು ಗಾಬರಿಗೊಂಡ ಚಾಲಕ ಹಾಗೂ ಪ್ರಯಾಣಿಕರು ಆಟೋವನ್ನು ರಸ್ತೆಯಲ್ಲೇ ಬಿಟ್ಟು ಜೀವಭಯದಿಂದ ಓಡಿದ್ದಾರೆ. ರೋಷಗೊಂಡ ಕಾಡಾನೆಯ ಹಿಂಡು ಆಟೋ ಮೇಲೆ ಧಾಳಿ ಮಾಡಿ ಸೊಂಡಿಲಿನಿಂದ ಸಮೀಪದ ತೋಟಕ್ಕೆ ಬಿಸಾಡಿದೆ. ಆಟೋ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಬಜೆಗೊಲ್ಲಿಯ ಮುಹಮ್ಮದ್ ಹಾಗೂ ಪ್ರಯಾಣಿಕರಾದ ಬಾಲಕೃಷ್ಣ ಮತ್ತು ಸೇದುರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿ ದೇವಯ್ಯ, ಸಿದ್ದಾಪುರ ಪೊಲೀಸ್ ಠಾಣೆಯ ಎಎಸೈ ಹೆಚ್.ಎಸ್ ಬೋಜಪ್ಪ, ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಬಜೆಗೊಲ್ಲಿ ಸಿದ್ದಾಪುರ ರಸ್ತೆಯಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಯಾವದೇ ಮಾಹಿತಿ ನೀಡದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಫಿ ತೋಟದಿಂದ ಓಡಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಾರ್ಗವಾಗಿ ಬಂದ ಕಾಡಾನೆಯ ಹಿಂಡು ಎದುರಿಗೆ ಬಂದ ಆಟೋ ಮೇಲೆ ಧಾಳಿ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಟೋ ಸಂಪೂರ್ಣವಾಗಿ ಜಖಂಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಮುಹಮ್ಮದ್ ಅವರಿಗೆ ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯತಿ ಸದಸ್ಯ ಎ.ಎಸ್. ಹುಸೈನ್ ಒತ್ತಾಯಿಸಿದ್ದಾರೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ವಿಪರೀತವಾಗಿದ್ದು, ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು, ವಾಹನ ಸವಾರರು ಜೀವ ಭಯದಲ್ಲೇ ದಿನ ದೂಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯತಿ ಮಾಜಿ ಸದಸ್ಯ ಪಿ.ವಿ. ಜಾನ್ಸನ್ ಆಗ್ರಹಿಸಿದ್ದಾರೆ.
ಗುಹ್ಯ ಗ್ರಾಮದಲ್ಲಿಯೂ ಕಾಡಾನೆ ಧಾಳಿ
ಇಲ್ಲಿಯ ಟಾಟಾ ಕಾಫಿ ಸಂಸ್ಥೆಯ ಅಂಚೆ ಪೇದೆ ರಾಜ ಮತ್ತು ಪಳ್ಳಕೆರೆ ತೋಟದ ಕಾರ್ಮಿಕ ಕಿಟ್ಟ ಕಾಡಾನೆ ಧಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಅಂಚೆ ಪೇದೆ ರಾಜ ತನ್ನ ಬೈಕ್‍ನಲ್ಲಿ ಪಳ್ಳಕೆರೆ ತೋಟದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷಗೊಂಡ ಕಾಡಾನೆ ಧಾಳಿ ಮಾಡಲು ಮುಂದಾಗಿದೆ. ರಾಜ ಸೇರಿದಂತೆ ಕಾರ್ಮಿಕ ಕಿಟ್ಟನನ್ನು ಕಾಫಿ ತೋಟದಲ್ಲಿ ಅಟ್ಟಾಡಿಸಿದ ಪರಿಣಾಮ ತೀವ್ರ ಗಾಯಗೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.