ಗೋಣಿಕೊಪ್ಪ ವರದಿ, ಜು. 28: ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಂದ ದೂರ ಇದ್ದಷ್ಟು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗ ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪಣ್ಣೇಕರ್ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶೈಕ್ಷಣಿಕ ವರ್ಷದ ಘಟಕವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತ ನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತು ಸೇರಿದಂತೆ ವಿವಿಧ ದುಶ್ಚಟಗಳಿಂದ ದೂರ ಉಳಿಯುವದು ಒಳಿತು. ಇಂತಹವದಕ್ಕೆ ದಾಸರಾದರೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗು ವದಿಲ್ಲ. ಉತ್ತಮ ಪ್ರಜೆಗಳೆಂದು ರೂಪಿಸಿಕೊಳ್ಳಲು ದುಶ್ಚಟಗಳಿಂದ ಹೊರ ಬರಬೇಕು ಎಂದರು.
ಮಾದಕ ವಸ್ತುಗಳ ಬಳಕೆ, ಮಾರಾಟ ಹೆಚ್ಚಾಗುತ್ತಿರುವದರಿಂದ ನಿಯಂತ್ರಿಸಲು ಶಿಕ್ಷೆಯ ಪ್ರಮಾಣ ಕೂಡ ಹೆಚ್ಚು ಕಠಿಣವಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಮಾದಕ ವಸ್ತುಗಳ ವಿರುದ್ಧ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಗುವದು. ಮಾರಾಟ, ಬಳಕೆ ಇಂತಹವುಗಳು ಪತ್ತೆಯಾದಲ್ಲಿ ಪೊಲೀಸ್ ಇಲಾಖೆ ಅಥವಾ ಕಾಲೇಜುಗಳಲ್ಲಿ ಸ್ಥಾಪಿಸಿರುವ ದೂರು ಪೆಟ್ಟಿಗೆಯಲ್ಲಿ ದೂರು ಹಾಕಬಹುದು. ಈ ಬಗ್ಗೆ ಇಲಾಖೆ ಕ್ರಮಕ್ಕೆ ಮುಂದಾಗಲಿದೆ ಎಂದರು.
ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗೆಳೆಯರನ್ನು ಸಂಪಾದಿಸಿಕೊಳ್ಳುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗಲಿದೆ. ವ್ಯಕ್ತಿ ಉತ್ತಮ ಮಾರ್ಗದಲ್ಲಿ ಪರಿವರ್ತನೆಗೊಳ್ಳಲು ಉತ್ತಮ ಗೆಳೆಯರ ಆಯ್ಕೆಗೆ ಕೂಡ ಅವಶ್ಯ ಎಂದರು.
ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ. ಸಿ. ಗಣಪತಿ ಮಾತನಾಡಿ, ವೈಜ್ಞಾನಿಕ ಚಿಂತನೆ ಹೆಚ್ಚು ಬೆಳವಣಿಗೆಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಎನ್‍ಎಸ್‍ಎಸ್ ಯೋಜನಾಧಿಕಾರಿ ವನೀತ್‍ಕುಮಾರ್, ನಾಯಕತ್ವ ಗುಣ ಹೆಚ್ಚಿಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಎನ್‍ಎಸ್‍ಎಸ್ ಸಹಕಾರಿ. ಇದರಿಂದಾಗಿ ಸೇವಕರು ಹೆಚ್ಚಾಗಿ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಪ್ರಾಂಶುಪಾಲ ಪ್ರೊ. ಎಸ್. ಆರ್. ಉಷಾಲತಾ, ಎನ್‍ಎಸ್‍ಎಸ್ ಯೋಜನಾಧಿಕಾರಿ ಎನ್. ಪಿ. ರೀತಾ ಉಪಸ್ಥಿತರಿದ್ದರು. ಅಂಜುಶಾ ನಿರೂಪಿಸಿದರು. ಆವರಣದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.