ಸಿದ್ದಾಪುರ, ಜು. 28: ಸರಕಾರದ ಆದೇಶದಂತೆ ಸಾರ್ವಜನಿಕ ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2 ಕೆರೆಗಳನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ನಡೆಸಿ ಪಂಚಾಯಿತಿಗಳ ಸ್ವಾಧೀನಕ್ಕೆ ನೀಡಲಾಗಿದೆ.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಸರಕಾರಕ್ಕೆ ಸೇರಿದ್ದ 4 ಎಕರೆ ವಿಸ್ತೀರ್ಣದ ಕೆರೆ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದಲ್ಲಿದ್ದ 1.71 ಎಕರೆ ವಿಸ್ತೀರ್ಣ ಕೆರೆಗಳ ಸುತ್ತಲು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು.
ನಂತರ ಬೇಲಿ ಹಾಕಿ ಆಯಾ ಗ್ರಾಮ ಪಂಚಾಯಿತಿಗಳ ಸ್ವಾಧೀನಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವೀನು, ಗ್ರಾಮ ಲೆಕ್ಕಿಗರಾದ ಅನಿಲ್ ಕುಮಾರ್, ಮಂಜುನಾಥ್, ಬಾನು, ಹರೀಶ್, ಕಂದಾಯ ಇಲಾಖೆಯ ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿಗಳು, ಪಿಡಿಓಗಳಾದ ರಾಜೇಶ್, ರಾಜನ್ ಇನ್ನಿತರರು ಹಾಜರಿದ್ದರು.
-ವಾಸು