ಮಡಿಕೇರಿ ಜು.28 : ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯಗಳಿದೆ ಎಂದು ಆರೋಪಿಸಿರುವ ಸಂಘದ ಮಾಜಿ ಪದಾಧಿಕಾರಿಗಳು, ಸೂಕ್ತ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸುವದಾಗಿ ತಿಳಿಸಿದ್ದಾರೆ.

ಪ್ರಸ್ತುತ ಸಂಘದ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿದ್ರುಪಣೆ ಮನು ಮೋಹನ್ ಅವರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಗಮನಿಸಿ, ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವದಾಗಿ ತಿಳಿಸಿದರು.

ಸಂಘದಲ್ಲಿ ಸದಸ್ಯರುಗಳು ಠೇವಣಿಯಾಗಿರಿಸಿದ ಹಣವನ್ನೇ ಅಲ್ಲಿನ ಕೆಲವು ಸಿಬ್ಬಂದಿಗಳು ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿ ರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿರುವ ಮನುಮೋಹನ್, ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದÀ ಸಂದರ್ಭ ಹಣವನ್ನು ಜಮೆ ಮಾಡಿಕೊಂಡು ಅನಗತ್ಯ ಸಬೂಬುಗಳನ್ನು ಹೇಳಿ, ನಿಜಾಂಶ ವನ್ನು ಮರೆ ಮಾಚಲಾಗಿದೆ ಎಂದು ದೂರಿದರು.

ಸಂಘದ ಸ್ವಂತ ಬಂಡವಾಳದಿಂದ ಪಡೆದ ಸಾಲದ ಶೇ. 13ರ ಬಡ್ಡಿಯನ್ನು ಶೇ. 3ಕ್ಕೆ ಇಳಿಸಿ ತಮಗೆ ಬೇಕಾದಂತೆ ಬಳಸಿಕೊಂಡಿರುವದಾಗಿ ಆಪಾದಿಸಿದರು.

ಹತ್ಯಾರು ವಿಭಾಗದಲ್ಲೂ ದುರುಪಯೋಗವಾಗಿದ್ದು, ರಸಗೊಬ್ಬರ ವನ್ನು ಮಾರಾಟ ಮಾಡುವಾಗ ಸಾಗಾಟ ವೆಚ್ಚವೆಂದು ಹೆಚ್ಚಿನ ದರವನ್ನು ಪಡೆಯಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟವಾದ ಲೆಕ್ಕಪತ್ರಗಳನ್ನು ಇಟ್ಟಿಲ್ಲವೆಂದು ಆರೋಪಿಸಿದರು.

2017-18ನೇ ಸಾಲಿನ ಸಂಘದ ಮಹಾಸಭೆಯನ್ನು ಇದೇ ತಾ. 30 ರಂದು ಕರೆಯಲಾಗಿದೆ. ಈ ಸಭೆಗೆ ಸಂಬಂಧಿಸಿದಂತೆ ವಾರಕ್ಕೆ ಮೊದಲೇ ನೀಡಬೇಕಾದ ನೋಟಿಸನ್ನು ಒಂದೆರಡು ದಿನಗಳ ಹಿಂದೆಯಷ್ಟೆ ನೀಡಲಾಗಿದೆ. ಸಭಾ ನೋಟಿಸ್‍ನಲ್ಲಿ ಸಂಘದ ಲೆಕ್ಕಪತ್ರಗಳ ಯಾವದೇ ಮಾಹಿತಿಯೂ ಇಲ್ಲ. ಆದ್ದರಿಂದ ಸಂಘದಲ್ಲಿ ನಡೆದಿರುವ ಅವ್ಯವಹಾರ ಗಳನ್ನು ಪತ್ತೆ ಹಚ್ಚುವ ಮೂಲಕ ಗ್ರಾಮೀಣರ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ನೆರವಾಗುವ ಸಹಕಾರ ಸಂಘವನ್ನು ಉಳಿಸಿಕೊಳ್ಳಬೇಕು ಎಂದು ಮನು ಮೋಹನ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಮುಂಡೋಡಿ ನಂದಾ ನಾಣಯ್ಯ, ಮುಕ್ಕಾಟಿ ಪೂಣಚ್ಚ ಹಾಗೂ ಬಿದ್ರುಪಣೆ ನರೇಂದ್ರ ಉಪಸ್ಥಿತರಿದ್ದರು.