ಕೂಡಿಗೆ, ಜು. 28: ರಾಜ್ಯಮಟ್ಟದ ಭಾರತ ಕಮ್ಯೂನಿಸ್ಟ್ ಪಕ್ಷದ (ಎಂ.ಎಲ್) ಜಿಲ್ಲಾ ಸಮ್ಮೇಳನ ಕುಶಾಲನಗರ ಹೋಬಳಿಯ 6ನೇ ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಮ್ಮೇಳನದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಘಟನಾತ್ಮಕ ವರದಿಯನ್ನು ಮಂಡಿಸಿದ ಭಾರತ ಕಮ್ಯುನಿಸ್ಟ್ ಪಕ್ಷದ ( ಮಾಕ್ರ್ಸ್‍ವಾದಿ ಲೆನಿನ್‍ವಾದಿ) ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಮಾತನಾಡಿ, ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತಲೇ ಇವೆ. ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡದೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡದೆ ರೈತರಿಗೆ ನಿರಂತರವಾಗಿ ಆರ್ಥಿಕ ನಷ್ಟ ಉಂಟಾಗುವದರಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬಲಾಢ್ಯರ ಪರ ಇರುವದರಿಂದ ಬಡವರಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ದೂರಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆರ್. ಮಂಜುನಾಥ್ ಹಾಗೂ ಆರು ಸದಸ್ಯರನ್ನು ಈ ಸಮಿತಿಗೆ ಆಯ್ಕೆ ಮಾಡಲಾಯಿತು.
ಆಗಸ್ಟ್ 4 ಮತ್ತು 5 ರಂದು ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ ಚಿಕ್ಕಮಗಳೂರಿನಲ್ಲಿ ನಡೆಯಲಿದ್ದು, 25 ಮಂದಿ ಪ್ರತಿನಿಧಿಗಳನ್ನು ಕೊಡಗು ಜಿಲ್ಲಾ ಸಮಿತಿಯಿಂದ ಆಯ್ಕೆ ಮಾಡಲಾಯಿತು.