ಸೋಮವಾರಪೇಟೆ, ಜು. 28: ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ದಾರ್ಶನಿಕ ಹಡಪದ ಅಪ್ಪಣ್ಣ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿರಿಕೊಡ್ಲಿ ಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ತನ್ನ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಲು ಶ್ರಮಿಸಿದ ಮಹಾನ್ ಶರಣ ಹಡಪದ ಅಪ್ಪಣ್ಣ ಎಂದು ಬಣ್ಣಿಸಿದರು.

ಮಹಾನ್ ವಚನಕಾರರಾಗಿದ್ದ ಅಪ್ಪಣ್ಣ ಅವರು ಬಸವಣ್ಣರವರೊಂದಿಗೆ ಗುರುತಿಸಿಕೊಂಡಿದ್ದರು. ತನ್ನ ಕಾಯಕದೊಂದಿಗೆ ವಚನಗಳನ್ನು ರಚಿಸಿದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸಮತೋಲನ ಬಗ್ಗೆ ತಮ್ಮ ವಚನಗಳ ಮೂಲಕ ಸಮಾಜದೆದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದರು.

ಇಂದು ವೈಜ್ಞಾನಿಕತೆಯ ಹೆಸರಿನಲ್ಲಿ ಜನರು ಸೋಮಾರಿ ಗಳಾಗುತ್ತಿದ್ದಾರೆ. ಯಾವದಕ್ಕೆ ಸಮಯವನ್ನು ವಿನಿಯೋಗಿಸ ಬೇಕೆಂದು ತಿಳಿಯದೆ ಕಾಲ ಕಳೆಯುತ್ತಿದ್ದಾರೆ. ಜನರು ಮೊದಲು ಸಮಯದ ಹೊಂದಾಣಿಕೆಯನ್ನು ತಿಳಿಯಬೇಕು. ಅಪ್ಪಣ್ಣ ಅವರ ಆಶಯದಂತೆ ಪ್ರೀತಿಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕೆಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಮಾತನಾಡಿ, ಸವಿತಾ ಸಮಾಜ ಇಂದಿಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಮಾಜ ಬಾಂಧವರು ಒಂದಾಗುವ ಮೂಲಕ ಸರ್ಕಾರದ ಯೋಜ&divound; Éಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸತೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಠಾಣಾಧಿಕಾರಿ ಶಿವಣ್ಣ, ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರಮೇಶ್, ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಹರೀಶ್, ನಗರ ಘಟಕದ ಅಧ್ಯಕ್ಷ ಶಂಕರ್, ಸಾಹಿತ್ಯ ಪರಿಷತ್‍ನ ಸೋಮಣ್ಣ, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕ ವೆಂಕಟೇಶ್, ಸವಿತಾ ಸಮಾಜದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.