ಸೋಮವಾರಪೇಟೆ, ಜು. 28: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಶಿಸ್ತು ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಇಲ್ಲಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ. ಟೆನ್ನಿ ಕುರಿಯನ್ ಹೇಳಿದರು. ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳಿಗೆ ಬದ್ಧರಾಗಿರಬೇಕು. ಕಾಲೇಜು ದಿನಗಳಲ್ಲಿ ದುಶ್ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿನಿ ನೇಹಾ, ಉಪನ್ಯಾಸಕ ಆನಂದ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಥಮ ಪಿಯುಸಿಗೆ ದಾಖಲಾದ ನೂತನ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಹೂ ಗಳನ್ನು ನೀಡಿ ಸ್ವಾಗತಿಸಿದರು.