ಮಡಿಕೇರಿ, ಜು. 29: ಕೊಡಗು ಪುಟ್ಟ ಜಿಲ್ಲೆಯಾದರೂ ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆಯಾಗಿದೆ. ಪ್ರವಾಸೋದ್ಯಮದಿಂದ ಹಿಡಿದು, ಪ್ರಾಮಾಣಿಕ ವಿದ್ಯುತ್ ಬಿಲ್ ಪಾವತಿ, ತೆರಿಗೆ ಸೇರಿದಂತೆ ಎಲ್ಲ ರೀತಿಯಲ್ಲೂ ಆದಾಯ ಸಲ್ಲುತ್ತಿದೆ. ಅದರಲ್ಲೂ ಅಬಕಾರಿ ಇಲಾಖೆ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ಕೊಡುತ್ತಿರುವ ಜಿಲ್ಲೆ ಕೊಡಗು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೂಲಕ ಇಲ್ಲಿನ ಸಭೆ ಸಮಾರಂಭಗಳಲ್ಲಿ ಮದ್ಯ ಬಳಸಲಾಗುತ್ತಿದ್ದು, ಅತಿ ಹೆಚ್ಚು ವ್ಯಾಪಾರವಾಗುತ್ತಿದೆ. ಇಷ್ಟೊಂದು ಆದಾಯ ತಂದುಕೊಡುತ್ತಿದ್ದರೂ ಇಲಾಖೆಗೊಂದು ಸ್ವಂತ ಕಟ್ಟಡ - ಕಚೇರಿಯಿಲ್ಲ, ಇಂದಿಗೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವ ಹಿಸುವಂತಹ ದುರ್ಗತಿ ಇಲ್ಲಿದೆ. 15 ವರ್ಷಗಳ ಹಿಂದೆ ಆರಂಭಗೊಂಡ ಅಬಕಾರಿ ಭವನ ಇಂದಿಗೂ ತಲೆ ಎತ್ತಿಲ್ಲ. ಅರೆ - ಬರೆ ಕಾಮಗಾರಿಯ ಕಟ್ಟಡ ಕಾಡುಪಾಲಾಗಿದೆ. ಬೀಡಾಡಿ ದನಗಳ ಗೂಡಾಗಿದೆ.
ಕೊಡಗು ಜಿಲ್ಲೆಯಿಂದ ಅಬಕಾರಿ ಇಲಾಖೆ ಮೂಲಕ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ. ಆದರೂ ಇಲಾಖೆಗೊಂದು ಸ್ವಂತ ಕಟ್ಟಡವಿಲ್ಲ. 2004-05ನೇ ಸಾಲಿನಲ್ಲಿ ಸರಕಾರ ಜಿಲ್ಲೆಗೆ ಅಬಕಾರಿ ಭವನ ಮಂಜೂರು ಮಾಡಿದ್ದು, ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ಕೆ. ನಿಡುಗಡೆ ಗ್ರಾ.ಪಂ. ವ್ಯಾಪ್ತಿಯ ಕೂಟುಹೊಳೆ ಬಳಿ ನಿವೇಶನ ಗುರುತಿಸಿ ಕಾಮಗಾರಿಯ ಗುತ್ತಿಗೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿತ್ತು. ಕಾಮಗಾರಿ ಆರಂಭಿಸಿದ ಇಲಾಖೆ ನೆಲ ಅಂತಸ್ತಿನ ಕೆಲಸ ಪೂರ್ಣಗೊಳಿಸಿದ್ದು, ನಂತರದಲ್ಲಿ ಮೇಲಂತಸ್ತಿನ ಕಾಮಗಾರಿಗೆ ಅನುದಾನವಿಲ್ಲದ್ದರಿಂದ ಅರ್ಧಕ್ಕೆ ನಿಲ್ಲಿಸಿದೆ.
70ಲಕ್ಷ ಬಿಡುಗಡೆ
ಭವನ ಮಂಜೂರಾತಿಯೊಂದಿಗೆ ಸರಕಾರ ರೂ. 70ಲಕ್ಷ ಹಣ ಬಿಡುಗಡೆ ಮಾಡಿತ್ತು. ಈ ಮೊತ್ತದಲ್ಲಿ ನೆಲಅಂತಸ್ತಿನಲ್ಲಿ ಅಬಕಾರಿ ಕಾಯ್ದೆಯಡಿ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ದಾಸ್ತಾನಿಡಲು ಗೋದಾಮು, ವಾಹನ ನಿಲ್ಲಿಸಲು ಶೆಡ್ಗಳು ಹಾಗೂ ಪ್ರಕರಣದಲ್ಲಿ ಬಂಧಿತರಾಗುವ ಆರೋಪಿಗಳನ್ನು ಬಂದಿಯಾಗಿರಿಸಲು ಸೆಲ್ಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದ್ದರಿಂದ ಅಲ್ಲಿಗೆ ನಿಂತಿದೆ.
3.30 ಕೋಟಿ ಪ್ರಸ್ತಾವನೆ
ಮೇಲಂತಸ್ತಿನಲ್ಲಿ ಅಬಕಾರಿ ಅಧೀಕ್ಷಕರ ಕಚೇರಿ ಸೇರಿದಂತೆ ಸಿಬ್ಬಂದಿ ಕೊಠಡಿಗಳ ನಿರ್ಮಾಣ ಆಗಬೇಕಿದೆ. ಆದರೆ ಇದಕ್ಕೆ ಅನುದಾನವಿಲ್ಲ ದಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಬಕಾರಿ ಇಲಾಖೆಯಿಂದ ಪತ್ರ ಸಲ್ಲಿಕೆ ಯಾಗಿದ್ದರೂ ಹಣ ಬಿಡುಗಡೆ ಯಾಗಿಲ್ಲ. ಕಟ್ಟಡ ಆರಂಭವಾಗಿ 15 ವರ್ಷಗಳು ಕಳೆದಿರುವದರಿಂದ ಇದೀಗ
(ಮೊದಲ ಪುಟದಿಂದ) ನಿರ್ಮಾಣ ವೆಚ್ಚ ಕೂಡ ಹೆಚ್ಚಳಗೊಂಡಿದ್ದು, ಮತ್ತೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಲಾಗಿದೆ.
ಲೋಕೋಪಯೋಗಿ ಇಲಾಖೆ ತಯಾರಿಸಿಕೊಟ್ಟಿರುವ ರೂ. 3.30 ಕೋಟಿ ಮೊತ್ತದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ದಿನಾಂಕ: 3.3.2017 ರಂದು ಸರಕಾರಕ್ಕೆ ಹಾಗೂ ಅಬಕಾರಿ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವದೇ ಉತ್ತರ ಕೂಡ ಇಲಾಖೆಯಿಂದ ಬಂದಿಲ್ಲ. ಅಲ್ಲದೆ ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ಕೆಡಿಪಿ ಸಭೆ, ಶಾಸಕರು, ಉಸ್ತುವಾರಿ ಸಚಿವರುಗಳ ಸಭೆಯಲ್ಲಿ ಪ್ರಸ್ತಾಪವಾಗಿ ಸಾಕಷ್ಟು ಚರ್ಚೆಗಳಾಗಿದ್ದರೂ ಯಾವದೇ ಫಲ ಸಿಕ್ಕಿಲ್ಲ.
ಕಾಡು ಪಾಲು
ಕಟ್ಟಡ ನಿರ್ಮಾಣವಾದ ಬಳಿಕ ಅತ್ತ ಕಡೆ ಯಾರೂ ಸುಳಿಯದ್ದರಿಂದ ಇದೀಗ ಕಟ್ಟಡ ಕಾಡು ಪಾಲಾಗಿದೆ. ಗಾಜುಗಳು ಪುಡಿಯಾಗಿವೆ. ಶೆಟ್ಟರ್ ಬಾಗಿಲುಗಳು ತುಕ್ಕು ಹಿಡಿದಿವೆ. ಆವರಣ ಬೀಡಾಡಿ ದನಗಳ ಪಾಲಾಗಿದ್ದು, ಸರಕಾರದ 70 ಲಕ್ಷ (ಇಂದು ಕೋಟಿ ಮೀರಲಿದೆ) ವೆಚ್ಚದ ಕಟ್ಟಡ ಮಣ್ಣು ಪಾಲಾಗುವತ್ತ ಸಾಗುತ್ತಿದೆ. ರೂ. 3.30 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಇದೇ ರೀತಿ ವಿಳಂಬವಾಗುತ್ತಾ ಹೋದರೆ 5 ಕೋಟಿ ಮೀರಿದರೂ ಅಚ್ಚರಿಯಿಲ್ಲ. ಜೊತೆಗೆ ಇದೀಗ ನಿರ್ಮಾಣವಾಗಿರುವ ಕಟ್ಟಡವನ್ನು ಸಂಪೂರ್ಣ ದುರಸ್ತಿ ಪಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಅದನ್ನು ಪ್ರತ್ಯೇಕ ಅನುದಾನದ ಅವಶ್ಯಕತೆ ಇದೆ. ಇನ್ನಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸಿ ಪಾಳು ಬಿದ್ದ ಕಟ್ಟಡಕ್ಕೆ ಮುಕ್ತಿ ಕರುಣಿಸಿ, ಇಲಾಖೆಗೆ ಸ್ವಂತ ಭವನ ಕಲ್ಪಿಸಿ, ಬಾಡಿಗೆ ಲೆಕ್ಕದಲ್ಲಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವಂತಾಗಲಿ.
-ಕುಡೆಕಲ್ ಸಂತೋಷ್