ಸುಂಟಿಕೊಪ್ಪ, ಜು. 31: ಮನೆ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಯಾರೋ ಕಿಡಿಗೇಡಿಗಳು ನಡುರಾತ್ರಿ ಬೆಂಕಿ ಹಚ್ಚಿರುವ ಘಟನೆ ನಿನ್ನೆ ಮಾದಾಪುರ ರಸ್ತೆಯಲ್ಲಿ ನಡೆದಿದೆ. ಅಲ್ಲಿನ ಶಬರಿಗಿರಿ ಹೊಟೇಲ್ ಮಾಲೀಕರಾಗಿರುವ ಬಾಲಕೃಷ್ಣರವರ ಮಗ ಪ್ರಕಾಶ್ ಅಲಿಯಾಸ್ ಅನಿ ಎಂದಿನಂತೆ ರಾತ್ರಿ ಆಟೋ ಬಾಡಿಗೆ ಮುಗಿಸಿ ಹೊಟೇಲ್ ಮುಂಭಾಗದಲ್ಲಿ ರಿಕ್ಷಾವನ್ನು ನಿಲುಗಡೆಗೊಳಿಸಿದ್ದಾರೆ. ಮಧ್ಯರಾತ್ರಿ ಸುಮಾರು 1.45ರ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಸಮಯ ಸಾಧಿಸಿ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದಾರೆ. ವಿಷಯವರಿತು ಮನೆಯವರು ಮತ್ತು ಸುತ್ತಮುತ್ತಲಿನವರು ಧಾವಿಸಿ ಬರುವಷ್ಟರಲ್ಲಿ ಆಟೋ ರಿಕ್ಷಾದ ಬಹುಭಾಗ ಅಗ್ನಿಯ ಕೆನ್ನಾಲಿಗೆಗೆ ಬಲಿಯಾಗಿತ್ತು. ಸಕಾಲದಲ್ಲಿ ಬೆಂಕಿಯನ್ನು ನಂದಿಸದಿದ್ದಲ್ಲಿ ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಸುಂಟಿಕೊಪ್ಪ ಪಟ್ಟಣದಲ್ಲಿ ಇತ್ತೀಚೆಗೆ ಯುವಕರ ಎರಡು ಗುಂಪುಗಳ ನಡುವೆ ಸಾರ್ವಜನಿಕರ ಸಮ್ಮುಖದಲ್ಲಿಯೇ ಮಾರಾಮಾರಿ ನಡೆದಿದೆ. ಈ ಪೈಕಿ ಕೆಲವರನ್ನು ಜೈಲಿಗಟ್ಟಲಾಗಿದ್ದು, ಹೊಡೆದಾಟದಲ್ಲಿ ಭಾಗಿಯಾದವರ ಪೈಕಿ ಯಾರಾದರೂ ವೈಷಮ್ಯದಿಂದ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.