ಭಾರತವನ್ನು ಸರ್ವನಾಶ ಮಾಡುವದೇ ನಮ್ಮ ಗುರಿಯಾಗಿರಬೇಕು, ಎಂದು ತನ್ನ ಜೀವನದುದ್ದಕ್ಕೂ ವಿಷ ಕಕ್ಕುತ್ತಿದ್ದ ಉಗ್ರ ಹಫೀಜ್ ಸಯೀದ್‍ಗೆ ಪಾಕಿಸ್ತಾನದ ಜನತೆ ಕೊನೆಗೂ ಸರಿಯಾದ ಪಾಠ ಕಲಿಸಿದ್ದಾರೆ. ಭಾರೀ ಅಬ್ಬರದೊಂದಿಗೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ಇಳಿದಿದ್ದ ಹಫೀಜ್ ನೇತೃತ್ವದ ಎಎಟಿ ಪಕ್ಷವನ್ನು ಅಲ್ಲಿನ ಮತದಾರರು ಕಸದ ಬುಟ್ಟಿಗೆ ಎಸೆದಿದ್ದಾರೆ. ಹಫೀಜ್ ಪಕ್ಷಕ್ಕೆ ಪಾಕ್ ಚುನಾವಣಾ ಆಯೋಗ ಸ್ಪರ್ಧಿಸಲು ಅವಕಾಶ ನೀಡಿದಾಗ, ಭಾರತ, ಅಮೇರಿಕ ಸೇರಿ ವಿಶ್ವವೇ ಆತಂಕಕ್ಕೆ ಒಳಗಾಗಿತ್ತು.
26/11 ಮುಂಬೈ ಧಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯನ್ನು ಹುಟ್ಟುಹಾಕಿದ್ದ ಹಫೀಜ್ ಸಯೀದ್ ಕುಟುಂಬದ ಸದಸ್ಯರು ಮತ್ತು ಆತನ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದಾರೆ. ಆ ಮೂಲಕ, ವಿಶ್ವಕ್ಕೆ ಹೊಸ ಸಂದೇಶ ರವಾನಿಸಲು ಪಾಕ್ ಮತದಾರ ಹೊರಟಂತಿದೆ.
ಧರ್ಮಯುದ್ಧ, ಜಿಹಾದಿ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾ ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಹಫೀಜ್, ಇದೇ ಹುಮ್ಮಸ್ಸಿನಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ. ಎರಡು ವರ್ಷಗಳ ಹಿಂದೆ, ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಹಿಜಬ್ ಕಮಾಂಡರ್ ಬುರಾನ್ ಮುಜಫರ್ ವಾನಿರನ್ನು ಹೊಡೆದುರುಳಿಸಿದ ನಂತರ, ಹಫೀಜ್ ‘ಹೇಟ್ ಸ್ಪೀಚ್’ ತಾರಕಕ್ಕೇರಿತ್ತು. ಭಾರತ ಮತ್ತು ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸದೇ ಈತನ ಭಾಷಣವೇ ಮುಗಿಯುತ್ತಿರಲಿಲ್ಲ.
ಎಎಟಿ ಪಕ್ಷದ ಚಿಹ್ನೆಯಡಿ 265 ಅಭ್ಯರ್ಥಿಗಳನ್ನು ಹಫೀಜ್ ಕಣಕ್ಕಿಳಿಸಿದ್ದ. ಈತನ ಎರಡನೇ ಅಳಿಯ ತಲ್ಲಾ ಸಯೀದ್ ಸೇರಿದಂತೆ, ಕುಟುಂಬಸ್ಥರೂ ಕಣದಲ್ಲಿದ್ದರು.
ಹಫೀಜ್ ಪಕ್ಷವನ್ನು ಪಾಕಿಸ್ತಾನದ ಮತದಾರ ತಿರಸ್ಕರಿಸಿದ್ದಾನೆ. ಹಫೀಜ್ ಕುಟುಂಬಸ್ಥರೂ ಸೇರಿ ಯಾರೊಬ್ಬರೂ ಚುನಾವಣೆಯಲ್ಲಿ ಗೆಲುವಿನ ದಡ ಸೇರಲಾಗದೇ, ಹೀನಾಯ ಸೋಲು ಅನುಭವಿಸಿದ್ದಾರೆ. ಒಂದೇ ಒಂದು ಸೀಟು ಗೆಲ್ಲಲಾಗದೇ ಹಫೀಜ್ ಪಕ್ಷವನ್ನು ಪಾಕಿಸ್ತಾನದ ಮತದಾರ ನೇರಾನೇರ ತಿರಸ್ಕರಿಸಿದ್ದಾನೆ. ಎಎಟಿ ಪಕ್ಷ ಒಂದೂ ಸ್ಥಾನ ಗೆಲ್ಲಲಿಲ್ಲ ಎನ್ನುವದನ್ನು ಇಸಿಪಿ (ಇಲೆಕ್ಷನ್ ಕಮಿಷನ್ ಆಫ್ ಪಾಕಿಸ್ತಾನ) ಖಚಿತ ಪಡಿಸಿದೆ.
ತೆಹ್ರಿಕ್ - ಇ- ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷ ಹಫೀಜ್ ರೀತಿಯಲ್ಲೇ ಮನಸ್ಥಿತಿ ಹೊಂದಿರುವ ಇನ್ನೊಂದು ಪಕ್ಷ ತೆಹ್ರಿಕ್ - ಇ- ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷ ನೂರೈವತ್ತು ಅಭ್ಯರ್ಥಿಗಳನ್ನು ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ಕಣಕ್ಕಿಳಿಸಿತ್ತು. ಸಿಂಧ್ ಭಾಗದಲ್ಲಿ ಕೇವಲ ಎರಡು ಸೀಟು ಗೆಲ್ಲುವಲ್ಲಿ ಮಾತ್ರ ಈ ಪಕ್ಷ ಯಶಸ್ವಿಯಾಗಿದೆ. ಈ ಫಲಿತಾಂಶ ದುಷ್ಪ್ರವೃತ್ತಿಯ ಪಕ್ಷಗಳಿಗೆ ಪಾಕ್ ಮತದಾರ ತೋರಿಸಿದ ಸರಿಯಾದ ಪಾಠ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಈ ಎರಡು ಪಕ್ಷಗಳ ಜೊತೆಗೆ ಜಮೈತೆ ಉಲೆಮಾ, ಮುತ್ತಾಹಿದಾ ಮಜೀಸ್ ಮುಂತಾದ ಪಕ್ಷಗಳು ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿವೆÉ. ಆ ಮೂಲಕ, ಸದಾ ರಾಜಕೀಯ ಅತಂತ್ರದಲ್ಲಿರುವ ಪಾಕಿಸ್ತಾನದ ಮುಖ್ಯವಾಹಿನಿಗೆ ಬರುವ ಈ ಕೋಮು ಪಕ್ಷಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 14)ದೊಳಗೆ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಇಂದು ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್(172) ದಾಟಲು ಸಣ್ಣ ಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ನೆರವು ಪಡೆಯಲಾಗುವದು ಎಂದು ಪಿಟಿಐ ವಕ್ತಾರ ನಯೀನುಲ್ ಹಕ್ ಹೇಳಿದರು. ಭಾರತ- ಪಾಕಿಸ್ತಾನ ಬಾಂಧವ್ಯ ವೃದ್ಧಿ ನಮ್ಮ ಗುರಿ ಎಂದು ಇಮ್ರಾನ್ ಹೇಳಿಕೆಯಿತ್ತಿದ್ದಾರೆ.
ಪಾಕಿಸ್ತಾನದ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾಂತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.
ಇಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 117 ಸ್ಥಾನಗಳಲ್ಲಿ ಜಯಗಳಿಸಿರುವ ಪಿಟಿಐ ಪಕ್ಷ ಸರ್ಕಾರ ರಚಿಸುವದು ಬಹುತೇಕ ಖಚಿತ. ಈ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳ ಬಗ್ಗೆ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಪರಾಮರ್ಶಿಸುತ್ತಿದ್ದಾರೆ. ಪಿಪಿಪಿ 43 ಹಾಗೂ ಪಿಎಂಎಲ್‍ಎನ್ 63 ಸ್ಥಾನಗಳು ಹಾಗೂ ಇತರೆ 47 ಸ್ಥಾನಗಳನ್ನು ಗೆದ್ದಿವೆ.
(ಕೃಪೆ: “ದೆಟ್ಸ್ ಕನ್ನಡ”)