ಗೋಣಿಕೊಪ್ಪ ವರದಿ, ಜು. 30 : ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಐವರ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯ ಡಾ. ಹೊಸಮನಿ ನೀಡಿದ ದೂರಿನಂತೆ ತಿತಿಮತಿ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದರಾಜು, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜೇಶ್, ತಿತಿಮತಿ ನಿವಾಸಿಗಳಾದ ಶರಣು, ಚಂದ್ರಶೇಖರ್ ಹಾಗೂ ಶಾಜಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಮಂಗಳವಾರ ವೈದ್ಯ ಡಾ. ಹೊಸಮನಿ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ಮುಗಿಸಿ ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ರೋಗಿಗೆ ಚಿಕಿತ್ಸೆ ನೀಡಿದರೂ ಹಲ್ಲೆಗೆ ಮುಂದಾಗಿದ್ದರು ಎಂದು ಡಾ. ಹೊಸಮನಿ ಆರೋಪಿಸಿ ದೂರು ನೀಡಿದ್ದರು. ಚಿಕಿತ್ಸೆ ನೀಡಿದ್ದರೂ ಇಲ್ಲಿಯೇ ದಾಖಲು ಮಾಡಿಕೊಳ್ಳುವಂತೆ ಒತ್ತಡ ಹೇರಿದಲ್ಲದೆ, ವೈದ್ಯರು, ದಾದಿ ಹಾಗೂ ಡಿ. ಗ್ರೂಪ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಪೊಲೀಸರು ಕ್ರಮಕ್ಕೆ ಮುಂದಾಗದ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಹೆಚ್. ಇ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯಲ್ಲಿ ಕೆಲವು ಸಾರ್ವಜನಿಕರು ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಸಿಬ್ಬಂದಿ ನೋವು ಹಂಚಿಕೊಂಡಿದ್ದರು. ಪ್ರಕರಣ ದಾಖಲಿಸದ ಪೊಲೀಸರನ್ನು ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿತ್ತು. ಇದೀಗ ಪ್ರಕರಣ ದಾಖಲಾಗಿದೆ. ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.