ಮಡಿಕೇರಿ ಜು.31 : ಕೊಡಗಿನಲ್ಲಿ ಜಮ್ಮಾ ಜಾಗ ಹೊಂದಿರುವವರು ಅದರ ಹಿಡುವಳಿದಾರರೇ ಹೊರತು ಜಾಗದ ಮಾಲೀಕರಲ್ಲ ಎಂದು ಪ್ರತಿಪಾದಿಸಿರುವ ಹಿರಿಯ ವಕೀಲ ಬಿ.ಎ.ಮಾಚಯ್ಯ ಅವರು, ಜಮ್ಮಾಬಾಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾವೇರಿಸೇನೆ ವತಿಯಿಂದ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಜಮ್ಮಾ ಜಾಗವನ್ನು ಕುಟುಂಬಗಳಿಗೆ ಬಳುವಳಿಯಾಗಿ ನೀಡಲಾಗಿದೆಯೇ ಹೊರತು ಯಾವದೇ ವ್ಯಕ್ತಿಗಲ್ಲ. ಜಮ್ಮಾ ಬಾಣೆ ಎಂಬವದು ಅರಣ್ಯ ಪ್ರದೇಶದಿಂದ ಉದ್ಭವಿಸಿದ ಭೂಮಿಯಾಗಿದ್ದು, ಅದರ ಒಡೆತನವನ್ನು ನೀಡಿದರೆ ಅಲ್ಲಿರುವ ಮರಗಳಿಗೆ ಕೊಡಲಿಪಟ್ಟು ಬೀಳಲಿದೆ ಎಂಬ ಕಾರಣದಿಂದಲೇ ರಾಜರ ಕಾಲದಿಂದಲೂ ಅದರ ಮಾಲೀಕತ್ವವನ್ನು ಯಾರೊಬ್ಬರಿಗೂ ನೀಡಿಲ್ಲ ಎಂದು ಅಭಿಪ್ರಾಯಪಟ್ಟರು. ಅರಣ್ಯ ಉಳಿಯಬೇಕು ಎಂಬ ಉದ್ದೇಶದಿಂದಲೇ ನ್ಯಾಯಾಲಯ ಕೂಡ ತನ್ನ ತೀರ್ಪಿನಲ್ಲಿ ಜಮ್ಮಾ ಜಾಗಕ್ಕೆ ‘ಒಡೆತನ’ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.
ಪ್ರತಿಯೊಂದು ಜಮೀನಿಗೂ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಿಧ ಹೆಸರುಗಳಿವೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ಸರಕಾರಿ ಭೂಮಿಗೆ ‘ಜಮ್ಮಾ’ ಎಂದು ಹೆಸರಿಸಲಾಗಿದೆ. ಪಾಳೆಯಗಾರ ಕಾಲದಿಂದಲೇ ಕೊಡಗಿನಲ್ಲಿ ಯಾರು ಭೂಮಿ ಸ್ವಾಧೀನ ಹೊಂದಿದ್ದರೋ ಅವರಿಗೆ ‘ಹಕ್ಕುಪತ್ರ’ ಇರಲಿಲ್ಲ. ಈ ಸಂದರ್ಭದಲ್ಲಿ ಬಲಾಢ್ಯರು ಅಂತಹ ಜಮೀನನ್ನು ಕಸಿದುಕೊಳ್ಳಬಹುದಿತ್ತು. ಈ ಹಿನ್ನೆಲೆಯಲ್ಲಿ ಅಂದು ಭೂಮಿ ಸ್ವಾಧೀನ ಅನುಭವ ಹೊಂದಿದ್ದವರು ತಮಗೆ ಹಕ್ಕುಪತ್ರ ನೀಡುವಂತೆ ರಾಜರನ್ನು ಕೇಳಿದ್ದರು. ಆ ಸಂದರ್ಭದಲ್ಲಿ ‘ಸನದು’ ಎಂಬ ಹೆಸರಿನಲ್ಲಿ ಜಮ್ಮಾ ಹೊಂದಿರುವವರಿಗೆ ಹಿಡುವಳಿದಾರರಾಗಿ ಹಕ್ಕುಪತ್ರವನ್ನು ನೀಡಿದ್ದಾರೆಯೇ ಹೊರತು ಮಾಲಕರು ಎಂದು ಸನದುನಲ್ಲಿ ಹೇಳಿಲ್ಲ ಎಂದು ಮಾಚಯ್ಯ ವಿಶ್ಲೇಷಿಸಿದರು.
ಈ ಹಿಡುವಳಿ ಹಕ್ಕು (ಆಕ್ಯುಪೆಂಟ್, ಹೋಲ್ಡರ್) ಸನದು ಕಾಲದಿಂದ 1964ರ ಸರಕಾರದ ಭೂ ಕಂದಾಯ ಕಾಯ್ದೆವರೆಗೂ ಹಾಗೆಯೇ ಕುಗ್ಗದೇ ನಿಂತಿದೆ. ಈ ಸನ್ನದು ಕೂಡಾ ವ್ಯಕ್ತಿಗೆ ಬದಲಾಗಿ ಇಡೀ ಕುಟುಂಬಕ್ಕೆ ನೀಡಿರುವುದರಿಂದ ಕುಟುಂಬದ ಪಟ್ಟೆದಾರರ ಹೆಸರಿಗೆ ಹಿಡುವಳಿ ಬರುತ್ತಿತ್ತೇ ಹೊರತು ವ್ಯಕ್ತಿಗಳಿಗೆ ಅಲ್ಲ. ಇದೇ ವಿಚಾರವನ್ನು ನ್ಯಾಯಾಲಯದ ಪೂರ್ಣಪೀಠ ಕೂಡ ಎತ್ತಿ ಹಿಡಿದಿದ್ದು, ಇದರಿಂದಾಗಿ ಕೊಡಗಿನಲ್ಲಿರುವ ಜಮ್ಮಾ ಜಾಗವನ್ನು ಮಾರಾಟ ಮಾಡುವದಕ್ಕಾಗಲಿ, ಭೂ ಪರಿವರ್ತನೆ ಮಾಡುವದಕ್ಕಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಪಪಡಿಸಿದರು.
ಜಮ್ಮಾಬಾಣೆ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಾಡಿರುವ ಕಾನೂನು ತಿದ್ದುಪಡಿಯಲ್ಲಿ ಕೂಡಾ ಜಮ್ಮಾಬಾಣೆ ಜಾಗವನ್ನು ಕಂದಾಯಕ್ಕೆ ಒಳಪಡಿಸಲು ಅವಕಾಶ ನೀಡಲಾಗಿದೆಯೇ ಹೊರತು ಅದರ ಮಾಲೀಕತ್ವವನ್ನು ನೀಡುವದಕ್ಕೆ ಅವಕಾಶವಿಲ್ಲ. ಅಲ್ಲದೆ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಕೂಡಾ ಕೊಡಗಿನ ವಿವಿಧ ಜಮೀನುಗಳ ‘ಪ್ರಿವಿಲೆಜ್’ನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಮಾಚಯ್ಯ ಹೇಳಿದರು.
ಹಿಡುವಳಿದಾರ ಹಾಗೂ ಒಡೆಯ ಎಂಬವದಕ್ಕೆ ಅಜಗಜಾಂತರ ವ್ಯತ್ಯಾಸವಿದ್ದು, ಜಮ್ಮಾಬಾಣೆ ಹಿಡುವಳಿದಾರರು ಭೂಮಿಗೆ ಮಾಲೀಕರಾಗಲು ಸಾಧ್ಯವಿಲ್ಲ. ನ್ಯಾಯಾಲಯದ ಪೂರ್ಣಪೀಠದ ಆದೇಶದ ವಿರುದ್ಧ ಇದುವರೆಗೆ ಯಾರೂ ಮೇಲ್ಮನವಿ ಸಲ್ಲಿಸಿಲ್ಲ ಮತ್ತು ಜಮ್ಮಾಬಾಣೆಗೆ ಹಿಡುವಳಿದಾರರು ಮಾಲೀಕರು ಎಂಬವದಕ್ಕೆ ಯಾವದೇ ಆದೇಶ ಬಂದಿಲ್ಲ. ಆದುದರಿಂದ ಜಮ್ಮಾ ಜಾಗವನ್ನು ಪರಭಾರೆ ಮಾಡುವದು ಕಾನೂನಿಗೆ ವಿರುದ್ಧವಾಗಿದೆ ಎಂದರು.
ಪ್ರಭಾವಿಗಳು ತಮ್ಮಲ್ಲಿರುವ ನೂರಾರು, ಸಾವಿರಾರು ಎಕರೆ ಜಮ್ಮಾಬಾಣೆ, ಜಮ್ಮಾಮಲೆಗಳನ್ನು ಉಳಿಸಿಕೊಳ್ಳುವದಕ್ಕಾಗಿ ಮತ್ತು ಅದರ ಮೇಲಿನ ಒಡೆತನ ಸಾಧಿಸುವದಕ್ಕಾಗಿ ತಂತ್ರಗಳನ್ನು ಮಾಡುತ್ತಲೇ ಇದ್ದಾರೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಜನಪ್ರತಿನಿಧಿಗಳಿಗೆ ಆಮಿಷವೊಡ್ಡಿ ಜಮ್ಮಾ ಜಾಗವನ್ನು ಭೂ ಪರಿವರ್ತನೆ ಮಾಡಿಸಿರುವ, ಅದನ್ನು ಮಾರಾಟ ಮಾಡಿರುವ ಹಲವಾರು ಉದಾಹರಣೆಗಳು ಕೊಡಗಿನಲ್ಲಿದ್ದು, ಇವುಗಳೆಲ್ಲವೂ ಕಾನೂನು ಬಾಹಿರ ಎಂದು ಮಾಚಯ್ಯ ಆರೋಪಿಸಿದರು.
ಇದೇ ಕಾರಣದಿಂದ ಜಿಲ್ಲಾಡಳಿತದ ಲೆಕ್ಕಪರಿಶೋಧನೆ ನಡೆಸಿದ ಅಧಿಕಾರಿಗಳು ಕೂಡ ಜಮ್ಮಾ ಜಾಗವನ್ನು ಭೂ ಪರಿವರ್ತನೆ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾವÀದೇ ಅಧಿಕಾರಿಗಳು ಮಾಡುವ ಆದೇಶಗಳು ನ್ಯಾಯಾಂಗದ ಆಶಯಕ್ಕೆ ಪೂರಕವಾಗಿರಬೇಕೇ ಹೊರತು, ಅದಕ್ಕೆ ವಿರುದ್ಧವಾಗಿರಬಾರದು. ಆದರೂ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಂಗದ ಆಶಯಕ್ಕೆ ವಿರುದ್ಧವಾಗಿ ಭೂಪರಿವರ್ತನೆ ಮತ್ತು ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಅಲ್ಲದೆ ಕೆಲವರು ಜಮ್ಮಾ ಹಿಡುವಳಿಗೆ ಸಂಬಂಧಿಸಿದಂತೆ ಕಾನೂನಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಂತಹವರ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವದು ಎಂದು ಮಾಚಯ್ಯ ಎಚ್ಚರಿಕೆ ನೀಡಿದರು.
ಬಾಣೆ ಜಮೀನನ್ನು ಕಂದಾಯಕ್ಕೆ ಒಳಪಡಿಸಿದರೆ ಅದು ಹಿಡುವಳಿದಾರರಿಗೆ ಮಾಲೀಕತ್ವ ನೀಡುತ್ತದೆ ಎಂಬ ವಾದ ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದ ಅವರು, ಅಂತಹ ದಾಖಲೆಗಳಿದ್ದಲ್ಲಿ ಹಾಜರುಪಡಿಸಿ ಎಂದು ಸವಾಲು ಹಾಕಿದರು.ಇದೇ ಸಂದರ್ಭ ಅವರು ಸನ್ನದು ಪ್ರತಿ ಹಾಗೂ ನ್ಯಾಯಾಲಯದ ಪೂರ್ಣ ಪೀಠದ ಆದೇಶದ ಪ್ರತಿಯನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಕಾವೇರಿ ಸೇನೆಯ ಸಂಚಾಲಕ ರವಿಚಂಗಪ್ಪ, ಮಾದಯ್ಯ ಹಾಗೂ ವಕೀಲರಾದ ದಿವ್ಯಾ ನಂಜಪ್ಪ ಉಪಸ್ಥಿತರಿದ್ದರು.