ಮಡಿಕೇರಿ, ಜು. 30: ಮಧ್ಯರಾತ್ರಿಯಲ್ಲಿ ಮನೆಯೊಂದರ ಬಳಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ಅವಾಚ್ಯ ಪದಗಳಿಂದ ಬೈಗುಳಗಳ ಸುರಿಮಳೆಯೊಂದಿಗೆ, ಎರಡು ಬಾರಿ ಗುಂಡು ಹಾರಿಸಿ, ಮೂರನೇ ಗುಂಡನ್ನು ಮನೆಯತ್ತ ಗುರಿಯಿರಿಸಿ ಹೊಡೆದು ಹಾನಿ ಉಂಟುಮಾಡಿರುವ ದುಷ್ಕøತ್ಯವು ನಿನ್ನೆ ಸಂಭವಿಸಿದೆ. ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗದ ನಿವಾಸಿ ಹಾಗೂ ವಿಮಾ ಸಂಸ್ಥೆ ಉದ್ಯೋಗಿ ಬಿ.ಎ. ಜನಾರ್ಧನ ಎಂಬವರ ಮನೆಯ ಕಿಟಕಿಗಳು ದುಷ್ಕರ್ಮಿಗಳ ಗುಂಡೇಟಿನಿಂದ ಪುಡಿಯಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ನಿನ್ನೆ ರಾತ್ರಿ 11.15ರ ಸುಮಾರಿಗೆ ಮನೆ ಮಾಲೀಕ ಜನಾರ್ಧನ್ ತನ್ನ ಸಹೋದರಿ ಪೂರ್ಣಿಮಾ, ಬಾವ ಸತೀಶ್ ಹಾಗೂ ವೃದ್ಧೆ ತಾಯಿ ಚೋಂದಮ್ಮ ಮತ್ತು ಸಹೋದರಿಯ ಮಗ ಸಿದ್ಧಾಂತ್‍ನೊಂದಿಗೆ ಟಿ.ವಿ. ಕಾರ್ಯಕ್ರಮ ವೀಕ್ಷಿಸುತ್ತಾ ಕುಳಿತಿದ್ದರು. ಈ ವೇಳೆ ಮನೆಗೆ ಹೊಂದಿ ಕೊಂಡಿರುವ ರಸ್ತೆಯಲ್ಲಿ ಸ್ಫೋಟದ ಶಬ್ಧ ಕೇಳಿಸಿದೆ. ಆ ಸಂದರ್ಭ ಮನೆಯೊಳಗಿದ್ದ ಸಂಬಂಧಿ ಸಿದ್ಧಾಂತ್ ಬಾಗಿಲು ತೆರೆದು ಏನೆಂದು ನೋಡುವಷ್ಟರಲ್ಲಿ ಜನಾರ್ಧನ ಅವರ ನಾಯಿ ಕೂಡ ಕೋಣೆಯಿಂದ ಹೊರಗೆ ಬಂದು ಬೊಗಳಿದೆ. ಅಷ್ಟರಲ್ಲಿ ಮನೆಯ ಪಕ್ಕ ರಸ್ತೆಯಲ್ಲಿ ಕಾರೊಂದು ನಿಂತಿದ್ದು, ಕಾರಿನಿಂದ ಇಳಿದ ವ್ಯಕ್ತಿಯೋರ್ವ ಅವಾಚ್ಯವಾಗಿ ಕರೆದು ಬಯ್ಯುವದು ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಜನಾರ್ಧನ್ ಅಂಗಳಕ್ಕೆ ಬಂದಿದ್ದ ಸಂಬಂಧಿ ಯೊಂದಿಗೆ ನಾಯಿಯನ್ನು ಮನೆಯೊಳಗೆ ಕರೆದುಕೊಂಡು ಬಾಗಿಲು ಬಂದ್ ಮಾಡಿದ್ದಾರೆ. ಅಷ್ಟರಲ್ಲಿ ಇವರ ಮನೆಯಿಂದ ಮೂರನೇ ಮನೆ ಬಳಿ ರಸ್ತೆಯಲ್ಲಿ ಮತ್ತೊಂದು ಗುಂಡಿನ ಶಬ್ಧ ಕೇಳಿಸಿದೆ.

ಈ ಸಂದರ್ಭ ಇವರ ಬಾವ ಸತೀಶ್ ಎಂಬವರು ಕಿಟಕಿ ಗಾಜಿನ ಮುಖಾಂತರ ಹೊರಗೆ ನೋಡಿದ್ದಾರೆ. ಆ ವೇಳೆ ಅದೇ ನೇರಕ್ಕೆ ಮನೆಯ ಕಿಟಕಿಯತ್ತ ನೋಟ ಹರಿಸಿದ್ದ ವ್ಯಕ್ತಿ ಮತ್ತೆ ಅವಾಚ್ಯವಾಗಿ ಬೈಯ್ಯತೊಡಗಿದ್ದು ಕೇಳಿಸಿದೆ. ಹೀಗಾಗಿ ಸತೀಶ್ ಕೂಡ ಮಧ್ಯದ ಕೋಣೆಯಲ್ಲಿ ಟಿ.ವಿ. ವೀಕ್ಷಿಸುತ್ತಿದ್ದೆಡೆಗೆ ಧಾವಿಸಿದ್ದಾರೆ.

ಮರುಕ್ಷಣದಲ್ಲಿ ಹೊರಗಿನಿಂದ ಸಿಡಿದ

(ಮೊದಲ ಪುಟದಿಂದ) ಗುಂಡು ಕಿಟಕಿಯ ಗಾಜುಗಳನ್ನು ಪುಡಿಗಟ್ಟಿದ್ದಲ್ಲದೆ, ಒಳಗಿನ ಕೋಣೆಯ ಗೋಡೆಗಳಿಗೂ ಅಪ್ಪಳಿಸಿದೆ. ತೀರಾ ಗಾಬರಿಗೊಂಡು ದಿಕ್ಕು ತೋಚದ ಜನಾರ್ದನ್ ಪೊಲೀಸ್ ಕಂಟ್ರೋಲ್ ರೂಂಗೆ ಮೊಬೈಲ್ ಕರೆ ಮಾಡಿ ದುಷ್ಕøತ್ಯದ ಬಗ್ಗೆ ಸುಳಿವು ನೀಡಿದ್ದಾರೆ. ಕಂಟ್ರೋಲ್ ರೂಂ ಸಿಬ್ಬಂದಿ ಜನಾರ್ದನ್ ಮನೆಗೆ ಕೆಲವೇ ಅಂತರದಲ್ಲಿರುವ ಗ್ರಾಮಾಂತರ ಠಾಣೆಗೆ ಸಂಪರ್ಕಿಸಲು ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆಯಿಂದ ಪ್ರಕರಣ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವದಾಗಿ ತಿಳಿಸಿದ ಮೇರೆಗೆ, ಅಲ್ಲಿಗೆ ವಿಷಯ ಮುಟ್ಟಿಸಲಾಗಿದೆ. ಈ ವೇಳೆ ಸಕಾಲದಲ್ಲಿ ಪೊಲೀಸರು ಘಟನೆ ನಡೆದ ಸ್ಥಳದತ್ತ ಧಾವಿಸಿದ್ದಾರೆ. ಅಷ್ಟರಲ್ಲಿ ದುಷ್ಕøತ್ಯ ಎಸಗಿರುವ ದುಷ್ಕರ್ಮಿಗಳೆಂದು ಶಂಕಿಸಲಾದ ಮೂವರು ವ್ಯಕ್ತಿಗಳಿದ್ದ ಕಾರೊಂದು ಆ ಮಾರ್ಗದಲ್ಲಿ ಶರವೇಗದಲ್ಲಿ ಕಣ್ಮರೆಯಾಗಿರುವ ಸುಳಿವು ಪೊಲೀಸರಿಗೆ ಲಭಿಸಿದೆ. ರಾತ್ರಿಯಾಗಿದ್ದರಿಂದ ಹಾಗೂ ರಸ್ತೆಯಿಂದ ಜನಾರ್ದನ ಅವರ ಮನೆಯ ಗುಂಡಿಯಲ್ಲಿ ಕೆಳಭಾಗಕ್ಕೆ ಇರುವ ಹಿನ್ನೆಲೆ, ಕಾರಿನ ಬಣ್ಣ ಅಥವಾ ಸಂಖ್ಯೆ ಗಮನಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ.

ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮನೆ ಮಂದಿಗೆ ಧೈರ್ಯ ತುಂಬುವದರೊಂದಿಗೆ, ಬಿರುಸಿನ ತನಿಖೆ ಕೈಗೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಭೇಟಿ: ದುಷ್ಕøತ್ಯದ ಬಗ್ಗೆ ತಿಳಿದುಕೊಂಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಡಿ. ಪಣ್ಣೇಕರ್ ಖುದ್ದು ಜನಾರ್ದನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ‘ಶಕ್ತಿ’ ಯೊಂದಿಗೆ ಮಾತನಾಡಿದ ಅವರು, ಘಟನೆ ಸಂಬಂಧ ತನಿಖೆ ಮುಂದುವರೆದಿದ್ದು, ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇಲ್ಮನೆ ಸದಸ್ಯರ ಭೇಟಿ: ಮನೆ ಮೇಲಿನ ಗುಂಡಿನ ಧಾಳಿ ಬಗ್ಗೆ ಮಾಹಿತಿ ತಿಳಿದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ, ಜನಾರ್ದನ್ ಕುಟುಂಬಕ್ಕೆ ಧೈರ್ಯ ತುಂಬಿದರಲ್ಲದೆ, ಇಂತಹ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣ ಹಾಗೂ ಇತರರು ಇದ್ದರು.

ಬಿರುಸಿನ ತನಿಖೆ: ಮನೆ ಮಾಲೀಕರಿಂದ ದೂರು ದಾಖಲಿಸಿಕೊಂಡಿರುವ ನಗರಠಾಣೆ ಪೊಲೀಸರು, ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ, ಠಾಣಾಧಿಕಾರಿ ಷಣ್ಮುಖಪ್ಪ, ಜಿಲ್ಲಾ ಅಪರಾಧ ಪತ್ತೆದಳ ಇನ್ಸ್‍ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಇತರ ಸಿಬ್ಬಂದಿಗಳೊಂದಿಗೆ ಪ್ರತ್ಯೇಕ ತಂಡಗಳಲ್ಲಿ ಬಿರುಸಿನ ತನಿಖೆ ನಡೆಸುತ್ತಿದ್ದಾರೆ.

ಸಂಶಯದ ನೋಟ : ಪೊಲೀಸರ ಶಂಕೆಯಂತೆ ಗುಂಡು ಹಾರಿಸಿರುವ ದುಷ್ಕರ್ಮಿಗಳಿಗೂ, ಗುಂಡೇಟಿನಿಂದ ಹಾನಿಯಾಗಿರುವ ಮನೆಯ ಮಾಲೀಕರಿಗೂ ಸಂಬಂಧವಿಲ್ಲದೆ, ಯಾರೋ ಅಪರಾಧ ಹಿನ್ನೆಲೆಯ ವ್ಯಕ್ತಿಯನ್ನು ಗುರಿಯಾಗಿಸಿ ದುಷ್ಕøತ್ಯ ಎಸಗಿರಬಹುದೆಂದು ಸಂಶಯದ ನೋಟ ಹರಿಸಿದ್ದಾರೆ. ಅಂತಹ ವ್ಯಕ್ತಿ ಈ ಪರಿಸರದ ಯಾವದೇ ಮನೆಯಲ್ಲಿ ಇರಬಹುದಾದ ಊಹೆಯೊಂದಿಗೆ ದುಷ್ಕøತ್ಯಕ್ಕೆ ಮುಂದಾಗಿರಬಹುದೆಂದು ಶಂಕಿಸಲಾಗಿದ್ದು, ತನಿಖೆಯೊಂದಿಗೆ ದುಷ್ಕರ್ಮಿಗಳು ಸೆರೆಯಾದ ಬಳಿಕವಷ್ಟೇ ಸತ್ಯಾಂಶ ತಿಳಿಯಬೇಕಿದೆ.

ಯಾರೂ ದ್ವೇಷಿಗಳಿಲ್ಲ: ದೂರುದಾರ ಜನಾರ್ದನ್ ಪ್ರಕಾರ, ತಾನು ಅವಿವಾಹಿತನಾಗಿದ್ದು, ವೃದ್ಧೆ ತಾಯಿಯೊಂದಿಗೆ ಇದೇ ಮನೆಯಲ್ಲಿ ಕಳೆದ ಮೂರು ದಶಕಗಳಿಂದ ವಾಸಿಸುತ್ತಾ ವಿಮಾ ಸಂಸ್ಥೆ ಉದ್ಯೋಗದಲ್ಲಿದ್ದು, ಯಾರೂ ಶತ್ರುಗಳಿಲ್ಲ ಅಥವಾ ದ್ವೇಷಿಗಳಿಲ್ಲ. ಮೂರು ದಿನಗಳಿಂದ ಮನೆಯಲ್ಲಿ ಸಂಬಂಧಿಗಳು ಇರುವ ಮೇರೆಗೆ ನಿನ್ನೆ ರಾತ್ರಿ ಟಿ.ವಿ. ನೋಡುತ್ತಾ ಮಲಗಲು ತಡವಾಗಿ, ಕೃತ್ಯ ನಡೆದಾಗ ಎಚ್ಚರದಿಂದ ಇದ್ದುದಾಗಿ ಹೇಳಿಕೊಂಡಿದ್ದಾರೆ. ಇಂದಿನ ಈ ಘಟನೆಯಿಂದ ಅನೇಕರು ಜನಾರ್ದನ್ ಮನೆಗೆ ಭೇಟಿ ನೀಡಿ ಆತಂಕದೊಂದಿಗೆ ಸಂತೈಸಿ ಹಿಂತೆರಳುತ್ತಿದ್ದ ದೃಶ್ಯ ಎದುರಾಯಿತು.