ಮಡಿಕೇರಿ, ಜು. 29: ಓದು ಮತ್ತು ಬರಹದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಬಹುದೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೊರ ತರಲಾಗಿರುವ ಸ್ಟೂಡೆಂಟ್ ವಾಯ್ಸ್ ಕಾಲೇಜು ಸುದ್ದಿ ಪತ್ರಿಕೆ ಅನಾವರಣ ಮಾಡಿ ಮಾತನಾಡಿದರು. ಪತ್ರಿಕೋದ್ಯಮ ವೃತ್ತಿಯಲ್ಲಿ ವೈಯಕ್ತಿಕ ಬದುಕು ಕಟ್ಟಿಕೊಳ್ಳಬಹುದು. ಇದರೊಂದಿಗೆ ಸಮಾಜಕ್ಕೆ ಸ್ಪಂದಿಸುವ ಕೆಲಸ ಮಾಡಬಹುದಾಗಿದೆ. ಆ ಮೂಲಕ ಆತ್ಮತೃಪ್ತಿ ಸಾಧಿಸಬಹುದೆಂದರು.

ಸಮಾಜ ಹೇಗಿದೆಯೋ ಹಾಗೇ ಮಾಧ್ಯಮಗಳಿವೆ. ಜನರು ಓದುವ ಮತ್ತು ವೀಕ್ಷಿಸುವ ಸುದ್ದಿಗಳನ್ನು ಮಾಧ್ಯಮಗಳು ನೀಡುತ್ತವೆ. ಸುದ್ದಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಎಲ್ಲಾ ರೀತಿಯ ಸುದ್ದಿ, ವರದಿಗಳು ಪ್ರಕಟವಾಗುತ್ತಿವೆ. ಅಪರಾಧ, ಕಾನೂನು ಬಾಹಿರ ಕೃತ್ಯ, ಸೆಕ್ಸ್, ಮನೆ ಹಾಳು ವಿಷಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ಭಾವನೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ವಾಸ್ತವದಲ್ಲಿ ಮಾಧ್ಯಮಗಳು ಎಲ್ಲಾ ವಿಷಯಗಳನ್ನು ಸಮಾಜದ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದ್ದು, ಜನರ ದೃಷ್ಟಿಕೋನದ ಮೇಲೆ ಸುದ್ದಿಗಳು, ವಿಶೇಷ ವರದಿಗಳು ಗಮನ ಸೆಳೆಯುತ್ತಿವೆ ಎಂದರು.

ಪತ್ರಿಕೋದ್ಯಮಕ್ಕೆ ಸಂಬಂಧಿಸಿ ದಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಬಿಎ ಅಂತಿಮ ವರ್ಷದಲ್ಲಿ ಶೇ.73 ಅಂಕ ಪಡೆದು ಉತ್ತೀರ್ಣರಾದ ವಂದನಾ ಅವರನ್ನು ಗೌರವಿಸಲಾಯಿತು.

ರಾಜ್ಯಶಾಸ್ತ್ರ ಉಪನ್ಯಾಸಕಿ ಪ್ರೊ.ಕುಸುಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಂಗ್ಲೀಷ್ ಉಪನ್ಯಾಸಕಿ ಡಾ.ಅನುಪಮಾ ಇದ್ದರು. ಮೊಹಮ್ಮದ್ ಶಫಿ ನಿರೂಪಿಸಿದರು. ಹರ್ಷಿತಾ, ದಿವ್ಯಾ ಪ್ರಾರ್ಥಿಸಿದರು. ರಾಜೇಶ್ವರಿ ವಂದಿಸಿದರು.