ಮಡಿಕೇರಿ, ಜು. 30: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಇದರ ವಾರ್ಷಿಕ ಮಹಾಸಭೆಯು ತಾ. 29 ರಂದು ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ವಹಿಸಿದ್ದರು.
ಸಭೆಯಲ್ಲಿ ನಿಧಿಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. 2018-19ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಎ. ಗೋಪಾಲ ಕೃಷ್ಣ ಹಾಗೂ ಕಾರ್ಯದರ್ಶಿ ಯಾಗಿ ಬಿ.ಕೆ. ಅರುಣ್ ಕುಮಾರ್, ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ರಾಮಚಂದ್ರ, ಖಜಾಂಚಿಯಾಗಿ ಗೀತಾ ಗಿರೀಶ್, ಸಹ ಕಾರ್ಯದರ್ಶಿಯಾಗಿ ಎಂ.ಕೆ. ಸುಬ್ರಮಣಿ ಅವರನ್ನು ಪುನರ್ ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾಗಿ ಕೇಶವ ಪ್ರಸಾದ್ ಮುಳಿಯ, ಡಾ. ಆರ್. ರಾಜಾರಾಂ, ಅನಂತ ಸುಬ್ರಾಯ ಭಟ್, ಜಯಶೀಲ ಪ್ರಕಾಶ್, ಸವಿತ ಕೆ. ಭಟ್, ಭರತೇಶ್ ಖಂಡಿಗೆ, ವೀರಾಜಪೇಟೆ ವಿಭಾಗದಿಂದ ಕೆ.ಕೆ. ಶ್ಯಾಂ ಹಾಗೂ ರಾಮಚಂದ್ರ ರಾವ್ ಮತ್ತು ಸೋಮವಾರಪೇಟೆ ವಿಭಾಗದಿಂದ ಜಿ.ಡಿ. ಶಿವಶಂಕರ್, ಪರಮೇಶ್ವರ ಭಟ್ ನೇಮಕಗೊಂಡರು.
2018-19ನೇ ಸಾಲಿಗೆ ನಾಮ ನಿರ್ದೇಶಕರುಗಳಾಗಿ ಕೆ.ಕೆ. ವಿಶ್ವನಾಥ್, ಎ.ವಿ. ಮಂಜುನಾಥ್ ಹಾಗೂ ಕವಿತ ಕೆ. ಅವರುಗಳನ್ನು ಆರಿಸಲಾಯಿತು. ಮಹಾಸಭೆಯು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ, ಭೋಜನ ದೊಂದಿಗೆ ಮುಕ್ತಾಯಗೊಂಡಿತು.
ಸರ್ಕಾರಿ ನೌಕರ ಸಾವು
ಸೋಮವಾರಪೇಟೆ, ಜು.30: ದಿಢೀರ್ ಅನಾರೋಗ್ಯಕ್ಕೀಡಾಗಿ ತಾಲೂಕು ಕಚೇರಿಯ ನೌಕರರೋರ್ವರು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೂಲತಃ ಮೈಸೂರು ನಿವಾಸಿ, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಪುರುಷೋತ್ತಮ್ (26) ಎಂಬವರೇ ಸಾವನ್ನಪ್ಪಿದವರಾಗಿದ್ದು, ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪುರುಷೋತ್ತಮ್ ಅವರು ನಿನ್ನೆ ದಿನ ಮೈಸೂರಿಗೆ ತೆರಳಿದ್ದು, ಮೂರ್ಚೆಗೆ ಒಳಗಾದರು ಎನ್ನಲಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸಹ, ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರ ತಂದೆ ನಿಧನಾನಂತರ ಅನುಕಂಪದ ಆಧಾರದ ಮೇಲೆ ಪುರುಷೋತ್ತಮ್ ಅವರಿಗೆ ಉದ್ಯೋಗ ನೀಡಲಾಗಿತ್ತು.