ಭಾಗಮಂಡಲ, ಜು. 31: ಭಾಗಮಂಡಲದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ರೂ. 5 ಕೋಟಿ ಹಣ ಮಂಜೂರು ಮಾಡಿದ್ದಾರೆ. ಜೆ.ಡಿ.ಎಸ್. ಪಕ್ಷದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಹೊಸೂರು ಜೆ. ಸತೀಶ್ ಕುಮಾರ್ ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಯವರು ಈ ಹಣ ಒದಗಿಸಿದ್ದಾರೆ.ಇತ್ತೀಚೆಗೆ ಕೊಡಗಿಗೆ ಮುಖ್ಯಮಂತ್ರಿ ಆಗಮಿಸಿದ್ದ ಸಂದರ್ಭ ಭಾಗಮಂಡಲದಲ್ಲಿ ಸತೀಶ್‍ಕುಮಾರ್ ಅವರು ಲಿಖಿತ ಮನವಿಯೊಂದನ್ನು ಸಲ್ಲಿಸಿದ್ದರು. ಆ ಮನವಿಯಲ್ಲಿನ ಅಂಶಗಳು ಹೀಗಿವೆ: ಭಾಗಮಂಡಲದಲ್ಲಿ ಸುಮಾರು 15 ಸರ್ಕಾರಿ ಬಸ್‍ಗಳು, 18-20 ಖಾಸಗಿ ಬಸ್‍ಗಳು ಮತ್ತು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನೇಕ ವಾಹನಗಳು ರಾತ್ರಿ ವೇಳೆ ರಸ್ತೆ ಬದಿಯೇ ನಿಲುಗಡೆಗೊಳ್ಳುತ್ತಿವೆ. ಹಗಲು ವೇಳೆ ಸುಮಾರು 50-60 ಬಸ್‍ಗಳು ಭಾಗಮಂಡಲಕ್ಕೆ ಬಂದು ಹೋಗುತ್ತವೆ. ಸುಮಾರು 500 ರಿಂದ 1000 ಲಘು ವಾಹನಗಳು ಬಂದು ರಸ್ತೆ ಬದಿಯೇ ನಿಲುಗಡೆಗೊಳ್ಳುತ್ತವೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಯಾತ್ರಾರ್ಥಿಗಳಿಗೆ ತುಂಬಾ ಅನಾನುಕೂಲವಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯವರ (ಮೊದಲ ಪುಟದಿಂದ) ಭಾಗಮಂಡಲ ಭೇಟಿಯ ಸವಿ ನೆನಪಿಗಾಗಿ ಪುಣ್ಯಕ್ಷೇತ್ರದ ತ್ರಿವೇಣೀ ಸಂಗಮದ ಸನಿಹದಲ್ಲಿರುವ ಭಗಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಬಸ್ ನಿಲ್ದಾಣ, ಇತರ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮತ್ತು ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಇತರ ಎಲ್ಲ ಮೂಲಭೂತ ಸೌಕರ್ಯ ಹೊಂದಿದ ಕಟ್ಟಡವನ್ನು ನಿರ್ಮಿಸಲು ಅಂದಾಜು ರೂ. 5 ಕೋಟಿ ವೆಚ್ಚದ ಅನುದಾನವನ್ನು ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಲಾಗಿತ್ತು. ಅಲ್ಲದೆ, ಸ್ಥಳೀಯ ಸಾರ್ವಜನಿಕರು ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸುವ ಕಟ್ಟಡಕ್ಕೆ ಅಗತ್ಯವಾದ ಸ್ಥಳ ಗುರುತಿಸಲು ಜಿಲ್ಲಾಧಿಕಾರಿಯವರಿಗೆ ಆದೇಶಿಸುವಂತೆಯೂ ಮನವಿಯಲ್ಲಿ ಸತೀಶ್‍ಕುಮಾರ್ ಕೋರಿದ್ದರು.

ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೂ. 5 ಕೋಟಿ ಹಣ ಮಂಜೂರು ಮಾಡಿದ್ದು ಮುಖ್ಯಮಂತ್ರಿಯವರ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಈ ಸಂಬಂಧ ಯೋಜನಾ ಜಾರಿಗೆ ಕಾವೇರಿ ನೀರಾವರಿ ನಿಗಮಕ್ಕೆ ಶಿಫಾರಸು ಮಾಡಿದ್ದಾರೆ.

66 ಕೆವಿ ವಿದ್ಯುತ್ ಘಟಕ

ಇದೇ ಅಲ್ಲದೆ, ಕುಂದಚೇರಿಯ ಪದಕಲ್ಲು ಕೋಡಿಮೊಟ್ಟೆಯಲ್ಲಿ 66 ಕೆ.ವಿ ವಿದ್ಯುತ್ ಉಪ ಘಟಕ ಸ್ಥಾಪಿಸಲು ಮುಖ್ಯಮಂತ್ರಿಯವರಿಗೆ ಮಾಡಿದ ಮನವಿಗೂ ಸ್ಪಂದನ ದೊರೆತಿದೆ ಎಂದು ಸತೀಶ್‍ಕುಮಾರ್ ತಿಳಿಸಿದ್ದಾರೆ ಈಗಾಗಲೇ ಪಂಚಾಯ್ತಿಯಿಂದ ಜಿಲ್ಲಾಧಿಕಾರಿಯವರಿಗೆÀ ಘಟಕ ಸ್ಥಾಪನೆಗೆ ಅಗತ್ಯವಾದ ಜಾಗ ಮಂಜೂರಾತಿಗಾಗಿ ಮನವಿ ಕಳುಹಿಸಲಾಗಿದೆ. ಜಾಗ ಲಭ್ಯವಾದೊಡನೆ ವಿದ್ಯುತ್ ಘಟಕದ ಕೆಲಸ ಆರಂಭಗೊಳ್ಳಲಿದೆ ಎಂದು ಅವರು ಮಾಹಿತಿಯಿತ್ತಿದ್ದಾರೆ.