ಮಡಿಕೇರಿ, ಜು. 31: ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂಭಾಗದ ನಿವಾಸಿ ಬಿ.ಎ. ಜನಾರ್ಧನ ಎಂಬವರ ಮನೆಯ ಮೇಲೆ ಗುಂಡಿನ ಧಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಮಡಿಕೇರಿಯ ಹೊಸ ಬಡಾವಣೆಯ ನಿವಾಸಿ ಲೋಕೇಶ್, ಮಹದೇವಪೇಟೆಯ ನಿವಾಸಿ ಅಕ್ರಂ ಹಾಗೂ ಮಕ್ಕಂದೂರು ಉದಯಗಿರಿ ನಿವಾಸಿ ಕಿಶೋರ್ ಬಂಧಿತ ಆರೋಪಿಗಳು. ಲೋಕೇಶ್ ಹಾಗೂ ಅಕ್ರಂ ಅವರುಗಳನ್ನು ವೀರಾಜಪೇಟೆಯಲ್ಲಿ ಬಂಧಿಸಿದ್ದು, ಕಿಶೋರ್ನನ್ನು ಮಕ್ಕಂದೂರಿನಲ್ಲಿ ಬಂಧಿಸಲಾಗಿದೆ.ಪ್ರಕರಣದಲ್ಲಿ ಲೋಕೇಶ್ ಪ್ರಮುಖ ಆರೋಪಿಯಾಗಿದ್ದು, ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಮಹೇಶ್ ಎಂಬಾತನ ಮೇಲೆ ಸೇಡು ತೀರಿಸಿ ಕೊಳ್ಳುವದಕ್ಕಾಗಿ ಈ ಕೃತ್ಯ ನಡೆದಿದೆ. ಇತ್ತೀಚೆಗೆ ಲೋಕೇಶ್, ಮಹೇಶ್ಗೆ ಸೇರಿದ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಅಂಗಡಿಯಲ್ಲಿ ಮಹೇಶ್ನ ಸಹೋದರಿ ಜೊತೆ ಜಗಳವಾಡಿದ್ದ ಎನ್ನಲಾಗಿದ್ದು, ಈ ಕುರಿತು ಲೋಕೇಶ್ ವಿರುದ್ಧ ಅತ್ಯಾಚಾರ ಯತ್ನ ಆರೋಪದಡಿ ಪೊಲೀಸ್ ದೂರು ದಾಖಲಾಗಿತ್ತು.
ಪೊಲೀಸ್ ತನಿಖೆಯ ಮಾಹಿತಿಯಂತೆ ಈ ನಡುವೆ ಮಹೇಶ್, ಲೋಕೇಶ್ ತನ್ನ ಬಳಿ ಕ್ಷಮೆಯಾಚಿಸ ಬೇಕು. ಎಂದು ಕೆಲವರ ಬಳಿ ಹೇಳಿಕೊಂಡಿದ್ದನೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಲೋಕೇಶ್, ಮಹೇಶ್ ತನಗೆ ತೊಂದರೆ ಮಾಡಬಹುದು
(ಮೊದಲ ಪುಟದಿಂದ) ಎಂಬ ಭಯದಿಂದ ಈ ಕೃತ್ಯವೆಸಗಿರುವದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಮಹೇಶ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಡಬಲ್ ಬ್ಯಾರಲ್ ಬಂದೂಕಿನೊಂದಿಗೆ ಅಕ್ರಂ ಹಾಗೂ ಕಿಶೋರ್ನೊಂದಿಗೆ ಲೋಕೇಶ್ ತಾ. 29ರ ರಾತ್ರಿ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂಭಾಗ ತೆರಳಿ ಮಹೇಶ್ ಸಹೋದರಿ ಮನೆಗೆ ಹೊಂಚು ಹಾಕಿದ್ದಾನೆ.
ಆದರೆ ಮನೆ ಯಾವದೆಂದು ತಿಳಿಯದೆ ಬಿ.ಎ. ಜನಾರ್ಧನ ಅವರ ಮನೆಯ ಮೇಲೆ ಲೋಕೇಶ್ ಗುಂಡು ಹಾರಿಸಿ ಬಳಿಕ ಸಹಚರರೊಂದಿಗೆ ಪರಾರಿಯಾಗಿದ್ದ. ಕೂಡಲೇ ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನಿನ್ನೆ ಲೋಕೇಶ್ ಹಾಗೂ ಅಕ್ರಂನನ್ನು ಬಂಧಿಸಿದ್ದು, ಇಂದು ಕಿಶೋರ್ನನ್ನು ಕೂಡ ಬಂಧಿಸಿ ಮೂವರನ್ನು ನ್ಯಾಯಾಂಗ ಬಂಧನಕ್ಕೊಳ ಪಡಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಲೋಕೇಶ್ ಹಾಗೂ ಅಕ್ರಂ ನಗರದ ಬಾರ್ವೊಂದರಲ್ಲಿ ಉದ್ಯೋಗಿಗಳಾಗಿದ್ದು, ಕಿಶೋರ್ ಗಾರೆ ಕೆಲಸ ಮಾಡುತ್ತಿದ್ದಾನೆ.