ಶ್ರೀಮಂಗಲ, ಜು. 31 : ಮಳೆಯಿಂದ ಉಂಟಾಗಿರುವ ರಸ್ತೆ ಹಾಗೂ ಇತರ ಆಸ್ತಿ-ಪಾಸ್ತಿಯ ಹಾನಿಯ ಬಗ್ಗೆ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಪಟ್ಟಿ ಮಾಡಿ ಆದಷ್ಟು ಬೇಗ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಬೇಕು. ಇದಕ್ಕೆ ಅಗತ್ಯವಾದ ಅನುದಾನವನ್ನು ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಲು ಪ್ರಯತ್ನಿಸಲಾಗುತ್ತದೆ. ಈಗಾಗಲೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ರೂ. 100 ಕೋಟಿ ಅನುದಾನವನ್ನು ಜಿಲ್ಲೆಗೆ ಮಂಜೂರು ಮಾಡಿದ್ದು, ಮಳೆ ಹಾನಿಗೆ ಹೆಚ್ಚುವರಿ ಅನುದಾನ ಅವಶ್ಯವಾದರೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸೇರಿಕೊಂಡು ಅನುದಾನ ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವದಾಗಿ ವಿಧಾನ ಪರಿಷತ್ತ್ ಸದಸ್ಯೆ ವೀಣಾಅಚ್ಚಯ್ಯ ತಿಳಿಸಿದರು.
ಅವರು ದಕ್ಷಿಣ ಕೊಡಗಿನ ವ್ಯಾಪ್ತಿಯ ಮಳೆ ಹಾನಿ ಹಾಗೂ ಸಾರ್ವಜನಿಕರ ಕುಂದುಕೊರತೆಯ ಬಗ್ಗೆ ಪೊನ್ನಂಪೇಟೆಯ ಪ್ರವಾಸಿಮಂದಿರದಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಮಳೆಯಿಂದ ಸಂಪೂರ್ಣ ಮನೆ ಹಾನಿಯಾದರೆ ಒಂದು ಲಕ್ಷ ಪರಿಹಾರ ಹಾಗೂ ಆಶ್ರಯ ಮನೆ ಮಂಜೂರು ಮಾಡಲು ಈಗಾಗಲೆ ಸರ್ಕಾರ ನಿರ್ಧರಿಸಿದೆ. ಅಲ್ಲದೆ ನದಿ ಹಾಗೂ ದೊಡ್ಡ ತೋಡುಗಳನ್ನು ದಾಟಲು ಮರದ ಪಾಲ ಅಳವಡಿಸಿದ್ದರೆ ಅದನ್ನು ಪರೀಶೀಲಿಸಿ ಕಾಲು ಸೇತುವೆ ನಿರ್ಮಿಸಲು ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್‍ಗಳು ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಕೂಡಲೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಾಗಲೆ 100 ಕೋಟಿ ಅನುದಾನ ನೀಡಿದ್ದು ಮುಂದೆಯು ಸಹ ಜಿಲ್ಲೆಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು ಸಹ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಎಂದು ವೀಣಾ ಅಚ್ಚಯ್ಯ ಹೇಳಿದರು.
ನಾಗರಹೊಳೆ ಅರಣ್ಯದ 32 ಕಿ.ಮೀ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು 42 ಕೋಟಿ ರೂ. ನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಅರಣ್ಯ ಇಲಾಖೆ ತಿಳಿಸಿದೆ ಇದನ್ನು ಮಂಜೂರು ಮಾಡುವಂತೆ ಕುಂಞಂಗಡ ಬೋಸ್‍ಮಾದಪ್ಪ ಮನವಿ ಮಾಡಿದರು. ಬೆಳೆ ಹಾನಿಯ ಬಗ್ಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ವೀಣಾ ಅಚ್ಚಯ್ಯ ಬೆಳೆಗಾರರಿಗೆ ಸೂಚಿಸಿದರು. ಈ ಸಂದರ್ಭ ಹಲವಾರು ಗ್ರಾಮೀಣ ರಸ್ತೆಗಳು ಮಳೆಗೆ ಹಾನಿಯಾಗಿದ್ದು ಅದರ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆಗೆ ಸಾರ್ವಜನಿಕರು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾಪಂಚಾಯತ್ ಇಂಜಿನಿಯರ್ ರಾಜೇಶ್ವರಿ, ಜಿ.ಪಂ ಸದಸ್ಯೆ ಶ್ರೀಜಾಶಾಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಪ್ರಮುಖರಾದ ವಾಸು ಕುಟ್ಟಪ್ಪ, ಧರ್ಮಜ ಉತ್ತಪ್ಪ, ಕೊಲ್ಲಿರ ಬೋಪಣ್ಣ, ಮೀದೇರಿರ ನವೀನ್ ಮತ್ರಂಡ ದಿಲ್ಲು, ಎರ್ಮುಹಾಜಿ. ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ, ಕಡೆಮಾಡ ಕುಸುಮ ಜೋಯಪ್ಪ ಮತ್ತಿತರರು ಹಾಜರಿದ್ದರು.