ಮೂರ್ನಾಡು, ಜು. 30: ಹೊರ ವಾತಾವರಣವಿಡೀ ಮಳೆಯಿಂದ ತಿಳಿಗೊಂಡು ಬಿಸಿಲಿನ ಹೊಳಪು.., ಒಳಗಡೆ ಮಾತ್ರ ಕವನಗಳ ಸುರಿಮಳೆ.., ಅದೂ ಮಕ್ಕಳ ಮಧುರ ಕಂಠಗಳಲ್ಲಿ... ಕತ್ತಲಾಗುತ್ತಿದ್ದಂತೆ ಹೊರ ಹೊಮ್ಮಿದ ನಾದ ಮಾಧುರ್ಯ.., ಕೇಳುಗರ ಕಿವಿಗಿಂಪು...

ಈ ವಿಭಿನ್ನ ವಾತಾವರಣ ಕಂಡು ಬಂದಿದ್ದು ಮೂರ್ನಾಡಿನ ಪಂಚಾಯತ್ ಸಭಾಭವನದಲ್ಲಿ. ಮೂರ್ನಾಡಿನ ಕವಯತ್ರಿ ಕೆ.ಜಿ. ರಮ್ಯ ಅವರು ತಮ್ಮ ಸಹವರ್ತಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ‘ಕತ್ತಲ ಹಾಡು’ ಹಾಗೂ ‘ಮಳೆ ಕವಿಗೋಷ್ಠಿ’ ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆಯಿತು.

ಮೂರ್ನಾಡು ವ್ಯಾಪ್ತಿಗೊಳಪ ಡುವ ವಿವಿಧ ಶಾಲೆ-ಕಾಲೇಜು ಗಳಿಂದ ಆಗಮಿಸಿದ್ದ ಮಕ್ಕಳು ರಚಿಸಿ, ವಾಚಿಸಲ್ಪಟ್ಟ ಕವನಗಳಲ್ಲಿ ಮಳೆಗಾಲದ ವೈಭವ, ಮಳೆಗಾಲದಲ್ಲಿನ ಬಾಲ್ಯದ ನೆನಪುಗಳು, ಮಳೆಯಿದ್ದರೆ ಮಾತ್ರ ಬೆಳೆ, ಮಳೆ ಬಂದರೆ ಶಾಲೆಗೆ ರಜೆ., ಮಳೆ ಅತಿಯಾದರೆ ಅಪಾಯ.

ಮುಂತಾದ ವಿಚಾರಗಳನ್ನು ತೆರೆದಿಟ್ಟರು. ಮಕ್ಕಳಲ್ಲಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಉತ್ತಮ ವೇದಿಕೆಯಾಗಿತ್ತು.

ಕಾವ್ಯದಿಂದ ಸಂದೇಶ

ಪ್ರತಿಭೆಯಿಂದ ಹುಟ್ಟಿ, ಜ್ಞಾನದಿಂದ ಕಟ್ಟಿದ ಕಾವ್ಯ ಸುಂದರ ಮತ್ತು ಅರ್ಥಗರ್ಭಿತ ಸಂದೇಶವನ್ನು ನೀಡುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ತೊರೆನೂರಿನ ಸಾಹಿತಿ ಸುಕುಮಾರ್ ಹೇಳಿದರು.

ಗಿಡದೊಳಗೆ ಹೂ ಅರಳಿದಂತೆ ಕಾವ್ಯ. ಅದಕ್ಕೆ ಇನ್ನಷ್ಟು ನೀರು ಗೊಬ್ಬರದ ಪ್ರೋತ್ಸಾಹ ದೊರೆತರೆ ಕಾವ್ಯದ ಹೂಗಳು ಅರಳುತ್ತವೆ ಎಂದರು. ವಿದ್ಯಾರ್ಥಿಗಳು ಹೊಸ ಹೊಸ ಕವಿತೆಗಳನ್ನು ಬರೆಯುವರೊಂದಿಗೆ, ಅದನ್ನು ಹೇಗೆ ವಾಚನ ಮಾಡಬೇಕೆಂದು ತಿಳಿದುಕೊಳ್ಳಬೇಕು. ಎಲ್ಲಾ ಮಕ್ಕಳಲ್ಲೂ ಕವಿತೆಗಳನ್ನು ಕಟ್ಟುವ ಶಕ್ತಿ ಇದೆ. ಸಾಹಿತ್ಯ ಸನ್ಮಾರ್ಗದಲ್ಲಿ ಸಾಗಲು ಹಾದಿಯಾಗುತ್ತದೆ. ಕವಿ ಕಾವ್ಯ ಕಟ್ಟುವದರ ಮೂಲಕ ಸಮಾಜಕ್ಕೆ ಬದುಕನ್ನು ಕಟ್ಟಿಕೊಡುತ್ತಾನೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಸಚಿನ್ ಅಂಕೋಲ ಮಾತನಾಡಿ, ಮನುಷ್ಯತ್ವದ ಕಡೆಗೆ ಬರಲು ಸಾಹಿತ್ಯ ಸಹಕಾರಿಯಾಗುತ್ತದೆ. ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರು ಸತ್ಪ್ರಜೆಗಳಾಗಲು ಉತ್ತಮ ಕಾರ್ಯ ಕ್ರಮಗಳನ್ನು ಆಯೋಜಿಸುವಂತಾಗ ಬೇಕು ಎಂದು ತಿಳಿಸಿದರು.

ಮೂರ್ನಾಡು ಗ್ರಾಮ ಲೆಕ್ಕಿಗ ಅಕ್ಷತ ಶೆಟ್ಟಿ ಸಮಾರಂಭವನ್ನು ಮಳೆ ನೀರನ್ನೆರೆಯುವದರ ಮೂಲಕ ಉದ್ಘಾಟಿಸಿ, ಸಣ್ಣ ಮಕ್ಕಳು ಕವನಗಳನ್ನು ರಚಿಸಿ ವಾಚಿಸುವದರಲ್ಲಿ ಹಿಂಜರಿಕೆ ಬೇಡ. ಮನಸ್ಸಿಗೆ ಬಂದ ಭಾವನೆಗಳಿಗೆ ಶಬ್ಧಗಳ ಜೋಡಣೆ ನಿರಂತರವಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಇದೊಂದು ಹೊಸ ಪ್ರಯತ್ನವಾಗಿದ್ದು, ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಮಕ್ಕಳಿಗೆ ಒಂದು ಮೆಟ್ಟಿಲಾಗಿದೆ. ಮಕ್ಕಳು ಇಂತಹ ಅವಕಾಶಗಳನ್ನು ಬಳಸಿಕೊಂಡು, ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಮಕ್ಕಳೊಂದಿಗೆ ಹಿರಿಯ ಕವಿಗಳಾದ ಹಾ.ತಿ. ಜಯಪ್ರಕಾಶ್, ಕುಡೆಕಲ್ ಸಂತೋಷ್, ಮಂಜುಗೋಪಿನಾಥ್ ನಾಯರ್, ಹೇಮಲತ ಪೂರ್ಣಪ್ರಕಾಶ್, ರಘು, ಕೌಸಲ್ಯ ಕೊಡಗು, ಕಾಸರಗೋಡಿನ ರಾಧಕೃಷ್ಣ ಉಳಿಯತಡ್ಕ, ಚೇತನ ಕುಂಬ್ಲೆ, ಅಕ್ಷಯ ಕಾಂತಬೈಲು ಇವರುಗಳು ತಮ್ಮ ಕವನಗಳನ್ನು ವಾಚಿಸಿ ಸಮಾರಂಭಕ್ಕೆ ಮೆರುಗು ನೀಡಿದರು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ, ಫಲಕಗಳನ್ನು ನೀಡಲಾಯಿತು.

ಸಮಾರಂಭದಲ್ಲಿ ವಿಶೇಷವಾಗಿ ನಿವೃತ್ತ ಶಿಕ್ಷಕಿ ದ್ರೌಪದಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎನ್.ಎನ್. ದೇವಕಿ, ಮಹಿಳಾ ಸಮಾಜ ಶಿಶು ವಿಹಾರದ ಶಿಕ್ಷಕಿ ರುಕ್ಮಿಣಿ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಮಂತ್ರಿಗಳ ಗಮನ ಸೆಳೆದ ಎಮ್ಮೆಮಾಡುವಿನ ಬಾಲಕ ಅಬ್ದುಲ್ ಫತಾಹ್, ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರೋಹಿಣಿ ಹರೀಶ್ ಹಾಜರಿದ್ದರು.

ಸಂಜೆ ಜರುಗಿದ ಶ್ರೀನಾದ ಮಣಿನಾಲ್ಕೂರು ಅವರ ಕತ್ತಲ ಹಾಡು ಕಾರ್ಯಕ್ರಮ ನೆರೆದವರ ಮನರಂಜಿಸಿತು.

-ಟಿ.ಸಿ. ನಾಗರಾಜ್