ವೀರಾಜಪೇಟೆ, ಜು. 31: ಮಾದಕ ಪದಾರ್ಥಗಳ ಬಳಕೆ ಅಪರಾಧ ಕೃತ್ಯಗಳನ್ನು ನಡೆಸಲು ಉತ್ತೇಜನ ನೀಡುತ್ತದೆ ಎಂದು ವೀರಾಜಪೇಟೆ ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಯೂತ್ ರೆಡ್‍ಕ್ರಾಸ್ ಘಟಕ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ರೆಡ್‍ಕ್ರಾಸ್ ರೋವರ್ಸ್ ಅಂಡ್ ರೇಂಜರ್ಸ್ ಘಟಕ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಕ್ರಮ"ವನ್ನು ಉದ್ಘಾಟಿಸಿ ಮಾತನಾಡಿದ ಅವರು 2ನೇ ಮಹಾ ಯುದ್ಧದ ಕಾಲದಿಂದಲೇ ರೆಡ್‍ಕ್ರಾಸ್ ಸಂಸ್ಥೆ ಪ್ರಾರಂಭಗೊಂಡಿದೆ. ಎಲ್ಲಾ ಸಂಘ ಸಂಸ್ಥೆಗಳು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸಬೇಕು. ಗಾಂಜಾ ಮಾರಾಟ ಯಥೇಚ್ಛವಾಗಿದ್ದು ಸಮಾಜಕ್ಕೆ ಮಾರಕವಾಗಿದೆ. ಯುವ ಜನತೆ ಸಾಮಾಜಿಕ ಪಿಡುಗುಗಳಿಂದ ದೂರ ಇರುವಂತೆ ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ ನಂಜಪ್ಪ ಮಾತನಾಡಿ ಯಾವದು ಒಳ್ಳೆಯದು, ಯಾವದು ಕೆಟ್ಟದ್ದು ಎಂಬದನ್ನು ತಿಳಿದುಕೊಳ್ಳಬೇಕು. ಭಾರತದ ಸಂವಿಧಾನ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಸಂವಿಧಾನ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ. ಜೀವನದಲ್ಲಿ ತಿಳುವಳಿಕೆ ಹಾಗೂ ನಡವಳಿಕೆಯನ್ನು ಅಳವಡಿಸಿಕೊಂಡರೆ ಪ್ರತ್ಯೇಕ ಕಾನೂನು ಅರಿವು ಕಾರ್ಯಕ್ರಮಗಳ ಅವಶ್ಯಕತೆ ಇರುವದಿಲ್ಲ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಟಿ.ಕೆ ಬೋಪಯ್ಯ ಮಾತನಾಡಿ ಮಾದಕ ವಸ್ತು ವಿರೋಧಿ ಜಾಗೃತ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ಬಹಳ ಅವಶ್ಯಕವಾಗಿದೆ. ಯುವ ಜನತೆ ಅಡ್ಡದಾರಿ ಹಿಡಿದರೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ರೋವರ್ಸ್ ಅಂಡ್ ರೇಂಜರ್ಸ್ ಅಧಿಕಾರಿ ಎಂ.ಎನ್ ವನೀತ್ ಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಎನ್.ಕೆ ನಳಿನಾಕ್ಷಿ ರೇಂಜರ್ಸ್ ಅಧಿಕಾರಿ ರಾಖಿ ಪೂವಣ್ಣ ಉಪಸ್ಥಿತರಿದ್ದರು. ವನೀತ್ ಕುಮಾರ್ ಸ್ವಾಗತಿಸಿ ರಾಖಿ ಪೂವಣ್ಣ ವಂದಿಸಿದರು.