ಮೂರ್ನಾಡು, ಜು. 29: ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ಪ್ರಾರಂಭಿಸಲಾದ ಪತ್ರಿಕೋದ್ಯಮ, ಯೋಗ ಮತ್ತು ಧ್ಯಾನ ಹಾಗೂ ಕಮ್ಯುನಿಕೇಟಿವ್ ಇಂಗ್ಲೀಷ್‍ಗಳ ಸರ್ಟಿಫಿಕೇಟ್ ಕೋರ್ಸ್‍ಗಳ ಉದ್ಘಾಟನಾ ಸಮಾರಂಭ ನಡೆಯಿತು.

ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೊಬೈಲ್ ಮತ್ತು ದೂರದರ್ಶನಗಳಿಂದ ಸಾಮಾಜಿಕ ಜೀವನ ಶೈಲಿಯೆ ಬದಲಾಗಿದೆ. ಮೊಬೈಲ್‍ನಿಂದ ಜನರ ಮಧ್ಯೆ ಬಾಂಧವ್ಯವೆ ಕಳಚಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಎಲ್ಲರೊಂದಿಗೆ ಬೆರೆತು, ಮಾತನಾಡುವದರೊಂದಿಗೆ ಉತ್ತಮ ಬಾಂಧ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಯೋಗ ಮತ್ತು ಧ್ಯಾನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ, ಮನಸ್ಸನ್ನು ಮತ್ತು ಶರೀರವನ್ನು ಒಂದುಗೂಡಿಸುವ ಶಕ್ತಿ ಯೋಗಕ್ಕಿದೆ. ಧ್ಯಾನದಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿಗುತ್ತದೆ ಎಂದು ತಿಳಿಸಿದರು.

ಪತ್ರಿಕೋದ್ಯಮ ಮತ್ತು ಮಾಧ್ಯಮ ಕೌಶಲ್ಯದ ಬಗ್ಗೆ ಮಾತನಾಡಿದ ಹರೀಶ್ ಸರಳಾಯ ಸುದ್ದಿಗಳ ವಿನಿಮಯದಿಂದ ಮಾತ್ರ ಸಮಾಜದ ದೇಶದ ಅಭಿವೃದ್ಧಿ ಸಾಧ್ಯ. ಈ ಕಾರ್ಯವನ್ನು ಪತ್ರಿಕೆ ಮತ್ತು ಮಾಧ್ಯಮಗಳು ನೆರವೇರಿಸುತ್ತಿದ್ದು ಇದರೊಂದಿಗೆ ಸಂವಿಧಾನದ ರಕ್ಷಣೆಯನ್ನು ಕೂಡ ಮಾಡುತ್ತಿದೆ ಎಂದರು. ಪತ್ರಿಕೋದ್ಯಮದಲ್ಲಿ ಸಮಾಜಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ನಿವೃತ್ತ ಪ್ರಾಂಶುಪಾಲೆ ಪ್ರೊ. ಪಿ.ಎ. ಭಾಗೀರಥಿ ಸಂಹವನ ಇಂಗ್ಲೀಷ್ ಕೌಶಲ್ಯದ ಬಗ್ಗೆ ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜ ಮಾದಪ್ಪ, ಈರಮಂಡ ಸೋಮಣ್ಣ, ಎ. ಎಂ. ಶೈಲಾ, ಸುಶೀಲಾ ಸುಬ್ರಮಣಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ವಿಲ್ಮ ಸ್ವಾಗತಿಸಿ, ಸಾದೇರ ದರ್ಶನ್ ಮಾದಪ್ಪ ಕಾರ್ಯಕ್ರಮ ನಿರೂಪಿಸಿ, ಶಾರದ ವಂದಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ: ಪದವಿ ಕಾಲೇಜಿನಲ್ಲಿ ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ನಾಲ್ವರು ವಿದ್ಯಾರ್ಥಿಗಳಿಗೆ ಮೂರ್ನಾಡು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು.

ಪರೀಕ್ಷೆಯಲ್ಲಿ ತೃತೀಯ ಬಿ.ಕಾಂನ ಅಕೌಂಟೆನ್ಸಿಯಲ್ಲಿ 150 ಅಂಕಗಳಿಸಿದ ಗೌತಮಿ (144), ಶಲ್ಯ (146), ದ್ವಿತೀಯ ಬಿ.ಕಾಂನ ವಿದ್ಯಾಶ್ರೀ (150), ಸುಶ್ಮಿತ (146) ಅವರುಗಳಿಗೆ ನೆನಪಿನ ಕಾಣಿಕೆ ಮತ್ತು ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.

ತರಗತಿ ಉಪನ್ಯಾಸ: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಿರುವ ಸರ್ಟಿಫಿಕೇಟ್ ಕೋರ್ಸ್‍ಗಳ ತರಗತಿಗಳು ಪ್ರಥಮ ಬಾರಿಗೆ ಆ. 1 ರಂದು ಪ್ರಾರಂಭಗೊಳ್ಳಲಿದೆ. ಪತ್ರಿಕೋದ್ಯಮ ಮತ್ತು ಮಾಧ್ಯಮ ಕೌಶಲ್ಯದ ಬಗ್ಗೆ ಆಕಾಶವಾಣಿ ಮಡಿಕೇರಿ ಉದ್ಘೋಷಕ ಸುಬ್ರಾಯ ಸಂಪಾಜೆ ಹಾಗೂ ಕೂಪದಿರ ಶಾರದ ನಂಜಪ್ಪ ಉಪನ್ಯಾಸ ನೀಡಲಿದ್ದಾರೆ ಹಾಗೂ ಕಮ್ಯೂನಿಕೇಟಿವ್ ಇಂಗ್ಲೀಷ್ ಇದರ ಬಗ್ಗೆ ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ಇಂಗ್ಲೀಷ್ ಉಪನ್ಯಾಸಕಿ ಪ್ರೊ. ಭಾರತಿ ಉಪನ್ಯಾಸವನ್ನು ನೀಡಲಿದ್ದಾರೆ. ಯೋಗ ಹಾಗೂ ಧ್ಯಾನದ ಕುರಿತು ಮಡಿಕೇರಿಯ ಜಾನ್ಸಿ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಈ ಕೌಶಲ್ಯ ತರಬೇತಿಗೆ ಮೂರ್ನಾಡುವಿನ ಸುತ್ತಮುತ್ತಲ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕೌಶಲ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಾಂಶುಪಾಲ ಪಟ್ಟಡ ಪೂವಣ್ಣ ತಿಳಿಸಿದ್ದಾರೆ.