ಶ್ರೀಮಂಗಲ, ಜು. 31: ಕುಟ್ಟ ಗ್ರಾಮದ ಚಿನ್ ಹೋಮ್ ಎಸ್ಟೇಟ್ನ ಮಾಲೀಕರಾದ ಚೆಪ್ಪುಡಿರ ಅಪ್ಪಯ್ಯ ಅವರ ಮನೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹತ್ತಿಕೊಂಡು ಅಪಾರ ನಷ್ಟವಾಗಿದೆ. ಆದರೆ ಕೂಡಲೇ ಎಚ್ಚೆತ್ತುಕೊಂಡ ಮನೆಯವರಿಂದ ಮನೆಯಲ್ಲಿದ್ದ ಜನರಿಗೆ ಯಾವದೇ ತೊಂದರೆಯಾಗಿಲ್ಲ.
ಮಂಗಳವಾರ ಬೆಳಗ್ಗಿನಜಾವ ಮರ ಹಾಗೂ ಹೆಂಚು ಬೆಂಕಿಯ ಬಿಸಿಗೆ ಒಡೆಯುತ್ತಿರುವ ಶಬ್ದಕೇಳಿ ಮನೆಯವರು ಹಾಗೂ ನೆರೆ ಮನೆಯವರು ಎಚ್ಚೆತ್ತು ನೋಡಿದಾಗ ಮನೆಯ ಮೇಲ್ಛಾವಣಿಯಲ್ಲಿ ಬೆಂಕಿ ಉರಿಯುತ್ತಿರುವದು ಕಂಡುಬಂದಿದೆ. ಈ ಸಂದರ್ಭ ಅನಾರೋಗ್ಯಕ್ಕೆ ತುತ್ತಾಗಿರುವ ಅಪ್ಪಯ್ಯ ಅವರನ್ನು ಪುತ್ರ ಕಿಶನ್ ಹೊರಗೆ ತಂದು ಕಾರಿನಲ್ಲಿ ಕೂರಿಸಿ ಬೆಂಕಿ ನಂದಿಸಲು ನೆರೆಕರೆಯವರಿಗೆ ತಿಳಿಸಿದ್ದಾರೆ. ಕೂಡಲೇ ನೆರೆಕರೆಯವರು ಕುಟ್ಟದ ನಿವಾಸಿಗಳು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ಸಂದರ್ಭ ಕೋಳೆರ ಮನೋಜ್ ಅವರು ತೋಟಕ್ಕೆ ಔಷಧಿ ಸಿಂಪಡಣೆ ಮಾಡುವ ಯಂತ್ರವನ್ನು ತಂದು ಬೆಂಕಿ ಮತ್ತಷ್ಟು ವ್ಯಾಪಿಸುವದನ್ನು ನಿಯಂತ್ರಿಸಲು ಸಫಲರಾದರು. ಗೋಣಿಕೊಪ್ಪದಿಂದ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ.
1935ರಲ್ಲಿ ನಿರ್ಮಿಸಿದ ಈ ಮನೆಯಲ್ಲಿ ಅಪ್ಪಯ್ಯ ಹಾಗೂ ಅವರ ಪತ್ನಿ ವೀಣಾ ವಾಸವಾಗಿದ್ದರು. ಆದರೆ ಸೋಮವಾರವಷ್ಟೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ನೆಲೆಸಿರುವ ಕಿಶನ್ ಆಗಮಿಸಿದ್ದರು. ಮನೆಯ ಮೇಲ್ಛಾವಣಿ ಹಾಗೂ ಮನೆಯಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ವಸ್ತು ಸುಟ್ಟು ಕರಕಲಾಗಿವೆ.