ವೀರಾಜಪೇಟೆ, ಜು.31: ನಾವು ಉತ್ತಮ ಜಿಲ್ಲಾಧಿಕಾರಿಗಳನ್ನು ಹೊಂದಿದ್ದೇವೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿ ಕಾಳಜಿ ಹೊಂದಿದ್ದಾರೆ. ಸರಕಾರದ ವಿವಿಧ ಇಲಾಖೆಗಳಲ್ಲಿರುವ ಕೆಲವು ಸಿಬ್ಬಂದಿಗಳು ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಸರ್ಕಾರಿ ಕಚೇರಿಯಲ್ಲಿ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಬೇರೆ ಕಡೆಗಳಿಗೆ ವರ್ಗಾಯಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.

ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಶೀಲಿಸುತ್ತಿದ್ದ ಸಂದರ್ಭ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆವಿನ್ಯೂ ಇನ್ಸ್‍ಪೆಕ್ಟರ್, ಇನ್ನು ಖಾಯಂ ಆಗದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಚೇರಿಗೆ ಬಂದ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಹಣ ಇಲ್ಲದೆ ಯಾವದೇ ಕೆಲಸ ನಿರ್ವಹಿಸುವದಿಲ್ಲ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್ ಹಾಗೂ ಸಿ.ಬಿ ರವಿ ದೂರು ನೀಡಿ ಸರ್ಕಾರಿ ಕಚೇರಿಗಳಲ್ಲಿ ಕೆಲವು ಸಿಬ್ಬಂದಿಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಬೇರೆಡೆಗೆ ವರ್ಗ ಮಾಡಿ ಎಂದು ಒತ್ತಾಯಿಸಿದರು.

ಅರಸು ನಗರದಲ್ಲಿರುವ ನೀರಿನ ಟ್ಯಾಂಕ್ ದುಸ್ಥಿತಿಯಲ್ಲಿದ್ದು ನೀರು ಸೋರಿಕೆಯಾಗುತ್ತಿದೆ. ಇದನ್ನು ದುರಸ್ತಿ ಪಡಿಸುವಂತೆ ಡಿ.ಪಿ.ರಾಜೇಶ್ ವೀಣಾ ಅವರನ್ನು ಒತ್ತಾಯಿಸಿದರು.

ಜಿಲ್ಲೆಯ ಹಲವಾರು ಕಡೆಗಳಲ್ಲಿ ಮನೆ ಕುಸಿತ, ಬರೆ ಕುಸಿತ, ಸೇರಿದಂತೆ ಇತರ ಹೆಚ್ಚಿನ ಹಾನಿಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ಮಳೆ ಹಾನಿ ಪರಿಹಾರದಲ್ಲಿ 10 ಕೋಟಿ ರೂಪಾಯಿ ಜಿಲ್ಲಾಧಿಕಾರಿಗಳ ಬಳಿ ಇದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೂರು ಕೋಟಿ ಪ್ಯಾಕೇಜ್ ನೀಡಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ವಿವಿರವನ್ನು ಉಪಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಈ ಬಾರಿ ಅತಿ ಹೆಚ್ಚು ಮಳೆಯಾಗಿರುವದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವಂತೆ ಜಿಲ್ಲೆಯ ನಾಲ್ಕು ಶಾಸಕರು ಪಕ್ಷ ಬೇಧ ಮರೆತು ಸರ್ಕಾರವನ್ನು ಒತ್ತಾಯಿಸುವದಾಗಿ ವೀಣಾ ಅಚ್ಚಯ್ಯ ಹೇಳಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಕುಮಾರ್, ಆರ್.ಎಂ.ಸಿ ಸದಸ್ಯ ಬೋಪಣ್ಣ, ರಂಜಿ ಪೂಣಚ್ಚ, ಅರವಿಂದ್ ಕುಟ್ಟಪ್ಪ, ಮಹಮದ್ ರಫಿ ಮತ್ತಿತರರು ಉಪಸ್ಥಿತರಿದ್ದರು.