ಮಡಿಕೇರಿ, ಜು. 29: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2018-19ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನಗಳ ಸೌಲಭ್ಯಗಳನ್ನು ನೀಡಲು ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವ್ಯಾಪಾರ, ಕೈಗಾರಿಕೆ, ಕೃಷಿ ಮತ್ತು ಸೇವಾವಲಯದಲ್ಲಿ ಬರುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕ ವೆಚ್ಚ ರೂ. 1 ಲಕ್ಷದೊಳಗೆ ಇರುವ ಚಟುವಟಿಕೆಗಳಿಗೆ ಶೇ. 50 ಅಥವಾ ಗರಿಷ್ಠ ಮಿತಿ ರೂ. 35 ಸಾವಿರ ಸಹಾಯಧನ, ಹಾಗೂ ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಟುವಟಿಕೆಗಳಿಗೆ ಘಟಕ ವೆಚ್ಚದ ಶೇ. 33 ಅಥವಾ ಗರಿಷ್ಠ ಮಿತಿ ರೂ. 2 ಲಕ್ಷದ ಸಹಾಯಧನ ನೀಡಲಾಗುವದು.
ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸಣ್ಣ ರೈತರಿಗೆ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 1 ರಿಂದ 5 ಎಕರೆ ಒಳಗಿರುವ ಖುಷ್ಕಿ ಜಮೀನುಗಳಿಗೆ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡುವ ಮುಖೇನ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಘಟಕ ವೆಚ್ಚ ರೂ. 2 ಲಕ್ಷಗಳಾಗಿರುತ್ತವೆ.
ಅರಿವು ಯೋಜನೆ (ವಿದ್ಯಾಭ್ಯಾಸ ಸಾಲ): ಈ ಯೋಜನೆಯಡಿಯಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಬಿ.ಇ, ಎಂ.ಬಿ.ಬಿ.ಎಸ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಎಂ.ಡಿ, ಬಿಫಾರ್ಮ, ಡಿ.ಎಡ್, ಐಟಿಐ, ಡಿಪ್ಲೋಮಾ, ಬಿಎಸ್ಸಿ-ನರ್ಸಿಂಗ್, ಬಿ.ಡಿ.ಎಸ್, ಬಿ.ಬಿ.ಎಂ, ಬಿ.ಎಡ್, ಎಂ.ಎ, ಪಿಹೆಚ್.ಡಿ, ಎಂ.ಕಾಂ, ಎಂಎಸ್ಸಿ, ಎಂಫಾರ್ಮಾ, ಎಲ್.ಎಲ್.ಬಿ, ಹಾಗೂ ಇತರೆ ವೃತ್ತಿಪರ ಕೋರ್ಸ್ಗಳಿಗೆ ರೂ. 10 ಸಾವಿರಗಳಿಂದ ವ್ಯಾಸಂಗಕ್ಕೆ ಅನುಗುಣವಾಗಿ ರೂ. 3.50 ಲಕ್ಷಗಳವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಸಾಲಕ್ಕೆ ಶೇ. 2 ರಂತೆ ಸೇವಾ ಶುಲ್ಕ ಪಡೆಯಲಾಗುವದು. ಅರ್ಜಿದಾರರ ವಾರ್ಷಿಕ ಆದಾಯ ರೂ. 6 ಲಕ್ಷಗಳ ಒಳಗಿರಬೇಕು.
ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆ: ಈ ಯೋಜನೆಯಡಿಯಲ್ಲಿ ಸಾಂಪ್ರದಾಯಿಕ ವೃತ್ತಿ ಕುಲಕಸುಬುದಾರರಿಗೆ ಅಂದರೆ ಕುಂಬಾರಿಕೆ, ಕ್ಷೌರಿಕ, ಪೊರಕೆ ಕಡ್ಡಿ ತಯಾರಿಕೆ ಟಿನ್ ವಸ್ತುಗಳ ತಯಾರಿಕೆ, ಟೈಲರಿಂಗ್, ಅಗರಬತ್ತಿ ತಯಾರಿಕೆ, ಹೀಗೆ ರಾಜ್ಯ ಸರ್ಕಾರವು ಸುಮಾರು 40 ವಿವಿಧ ವೃತ್ತಿ ಕುಲಕಸುಬುಗಳನ್ನು ಗುರುತಿಸಿರುವ ಎಲ್ಲಾ ಕುಲಕಸುಬುಗಳಿಗೆ ನಿಗಮದಿಂದ ರೂ. 25 ಸಾವಿರ ಹಾಗೂ 50 ಸಾವಿರಗಳಿಗೆ ಶೇ. 50 ರಷ್ಟು ಸಾಲ ಹಾಗೂ ಶೇ. 50 ರಷ್ಟು ಸಹಾಯಧನ ಕಲ್ಪಿಸಲಾಗುತ್ತಿದೆ. ಸಾಲಕ್ಕೆ ಶೇ. 4 ರ ಬಡ್ಡಿ ದರವನ್ನು ವಿಧಿಸಲಾಗುತ್ತಿದೆ.
ಮೈಕ್ರೋಲೋನ್ ಯೋಜನೆ: ಈ ಯೋಜನೆಯಡಿಯಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಟಿತ ಗುಂಪುಗಳಿಗೆ ಅವರು ವಾಸಿಸುವ ಅರೆ ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ಪುರುಷ ಸ್ವಸಹಾಯ ಗುಂಪುಗಳಿಗೆ ವಿವಿಧ ಸಣ್ಣ ವ್ಯಾಪಾರಗಳಾದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು, ಹೂವು, ಕಡ್ಲೆಕಾಯಿ, ಬೀಡಿಕಟ್ಟುವದು, ಅಗರಬತ್ತಿ ತಯಾರಿಕೆ, ಟೀಸ್ಟಾಲ್ ಹಾಗೂ ಇತರೆ ಸಣ್ಣ ವ್ಯಾಪಾರ ಕೈಗೊಳ್ಳಲು ರೂ. 10 ಸಾವಿರಗಳನ್ನು ಪ್ರತಿ ಸದಸ್ಯರಿಗೆ ಸ್ವಸಹಾಯ ಸಂಘದ ಮುಖೇನ ಸಾಲ ನೀಡಲಾಗುವದು. ಈ ಯೋಜನೆಯಡಿ ರೂ. 5 ಸಾವಿರಗಳ ಸಾಲ ಹಾಗೂ ರೂ. 5 ಸಾವಿರ ಸಹಾಯಧನವಿದೆ. ಈ ಯೋಜನೆಗೆ ಶೇ.5 ರ ಬಡ್ಡಿದರವನ್ನು ವಿಧಿಸಲಾಗುವದು.
ಪಶು ಸಂಗೋಪನಾ ಯೋಜನೆ:(ಗ್ರಾಮೀಣ ಪ್ರದೇಶದ ಮಹಿಳೆಯರಿಗೆ) ಈ ಯೋಜನೆಯಡಿ ಪಶು ಸಂಗೋಪನ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹಾಗೂ ನಿರಂತರ ಆದಾಯ ಹೊಂದುವ ಸಲುವಾಗಿ ಹಸು, ಕೋಳಿ, ಕುರಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಗ್ರಾಮೀಣ ಪ್ರದೇಶದ ಫಲಾಪೇಕ್ಷಿಗಳಿಗೆ ಗರಿಷ್ಠ ರೂ. 40 ಸಾವಿರ ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯನ ನೀಡಲಾಗುವದು. ಈ ಯೋಜನೆಯಡಿ ಒಟ್ಟು ಘಟಕ ವೆಚ್ಚದ ಮೊತ್ತದಲ್ಲಿ ಶೇ. 50 ರಷ್ಟು ಸಹಾಯಧನವಿದೆ. ಸಾಲಕ್ಕೆ ಶೇ. 3 ರಷ್ಟು ಬಡ್ಡಿಯನ್ನು ವಿಧಿಸಲಾಗುವದು. ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು.
ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸಲು ಉಳುಮೆಯಿಂದ ಕೊಯ್ಲುವರೆಗೆ ಕೃಷಿ ಚಟುವಟಿಕೆಗೆ ಉಪಯುಕ್ತ ವಿವಿಧ ಮಾದರಿಯ ಉಪಕರಣಗಳಾದ ಸಣ್ಣ ಟ್ರ್ಯಾಕ್ಟರ್, ಪವರ್ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು ಇತ್ಯಾದಿಗಳನ್ನು ರೂ. 1 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೇರವಾಗಿ ನೀಡಲಾಗುವದು. (ರೂ. 50 ಸಾವಿರ ಸಾಲ ಹಾಗೂ ರೂ. 50 ಸಾವಿರಗಳು ಸಹಾಯಧನವಿದೆ) ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು.
ಅಲ್ಪಸಂಖ್ಯಾತರ ಟ್ಯಾಕ್ಸಿ ಕಲ್ಯಾಣ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಫಲಾನುಭವಿಗಳಿಗೆ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಸಲು ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಗದೇ ಖಾಸಗಿ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನ ಸಾಗಿಸುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದೊಂದಿಗೆ ಟ್ಯಾಕ್ಸಿ-ಗೂಡ್ಸ್ ವಾಹನವನ್ನು ಖರೀದಿಸುವ ಫಲಾನುಭವಿಗಳಿಗೆ ಗರಿಷ್ಠ ರೂ. 3 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಖರೀದಿಸುವ ವಾಹನದ ಮೌಲ್ಯ ಕನಿಷ್ಟ ರೂ. 4 ಲಕ್ಷಗಳಿಂದ ರೂ. 7.50 ಲಕ್ಷಗಳಾಗಿರತಕ್ಕದ್ದು. (ತೆರಿಗೆ ಹೊರತುಪಡಿಸಿ) ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು ಹಾಗೂ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಿಗಿಯನ್ನು ಮತ್ತು ಬ್ಯಾಡ್ಜ್ ಹೊಂದಿರತಕ್ಕದ್ದು.
ಗೃಹ ನಿರ್ಮಾಣ ಮೇಲಿನ ಬಡ್ಡಿ ಸಹಾಯಧನ ಯೋಜನೆ: (ಕ್ರಿಶ್ಚಿಯನ್ ಸಮುದಾಯದ ಜನಾಂಗದವರಿಗೆ ಮಾತ್ರ) ಈ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ಜನರು ಮನೆ ನಿರ್ಮಾಣ ಮಾಡಲು ರಾಷ್ಟ್ರಿಕೃತ ಬ್ಯಾಂಕುಗಳು ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ಬಡ್ಡಿ ಮೊತ್ತ ಗರಿಷ್ಠ ರೂ. 1 ಲಕ್ಷಗಳವರೆಗೆ ಗೃಹ ಸಾಲ ಯೋಜನೆಯಡಿ ಬಡ್ಡಿ ರಿಯಾಯಿತಿ ಸಹಾಯಧನವಾಗಿ ಪರಿಗಣಿಸಿ ಸಂಬಂಧಿಸಿದ ಬ್ಯಾಂಕ್ಗೆ ಹಣ ನೀಡಲಾಗುವದು. ಈ ಯೋಜನೆಯ ಲಾಭವನ್ನು 2007 ರ ಏಪ್ರಿಲ್ನಿಂದ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಯಿಂದ ಈಗಾಗಲೇ ಗೃಹಸಾಲ ಪಡೆದಿರುವ ಕ್ರಿಶ್ಚಿಯನ್ ಸಮುದಾಯದ ಫಲಾಪೇಕ್ಷಿಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ಕೃಷಿ ಭೂಮಿ ಖರೀದಿ ಯೋಜನೆಯಡಿ: ಭೂರಹಿತ ಕೂಲಿ ಕಾರ್ಮಿಕ ಅಲ್ಪಸಂಖ್ಯಾತರಿಗೆ 1 ಎಕರೆ ತರಿ ಅಥವಾ 2 ಎಕರೆ ಖುಷ್ಕಿ ಭೂಮಿಯನ್ನು ಖರೀದಿಸಲು ರೂ. 10 ಲಕ್ಷದವರೆಗೆ ಶೇ. 6 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇದರಲ್ಲಿ ಶೇ. 50 ರಷ್ಟು ಸಹಾಯಧನವಾಗಿರುತ್ತದೆ.
ಆಟೋ ಮೊಬೈಲ್ ಸರ್ವೀಸ್ ತರಬೇತಿ ಹಾಗೂ ಸಾಲ ಯೋಜನೆ: ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಯುವಕರು ವರ್ಕ್ ಶಾಫ್ಗಳಲ್ಲಿ ಮೆಕ್ಯಾನಿಕ್ಗಳಾಗಿ ದುಡಿಯುತ್ತಿರುವವರಿಗೆ ನಿಗಮದಿಂದ ಪ್ರತಿಷ್ಠಿತ ಆಟೋಮೊಬೈಲ್ ಸರ್ವೀಸ್ ಸಂಸ್ಥೆಗಳಾದ ಟೊಯಾಟ, ವೋಲ್ವೊ, ಟಾಟಾ, ಟಫೆ ಈ ಕಂಪನಿಗಳ ಸಹಯೋಗದೊಂದಿಗೆ ತರಬೇತಿ ನೀಡಿ ನಿಗಮದಿಂದ ರಾಷ್ಟ್ರೀಯ ಬ್ಯಾಂಕ್ ಸಹಯೋಗದೊಂದಿಗೆ ರೂ. 2 ಲಕ್ಷಗಳಿಂದ ರೂ. 5 ಲಕ್ಷದವರೆವಿಗೂ ಸಾಲ ಹಾಗೂ ಸಹಾಯಧನ ನೀಡಲಾಗುವದು. ನಿಗಮದಿಂದ ಕನಿಷ್ಟ ರೂ. 70 ಸಾವಿರಗಳಿಂದ ರೂ. 1.25 ಲಕ್ಷದವರೆವಿಗೂ ಸಹಾಯಧನ ನೀಡಲಾಗುವದು. ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು.
“ಮನೆ ಮಳಿಗೆ”: ಈ ಯೋಜನೆಯಡಿ ಕೋಮು ಗಲಭೆ/ ಕೋಮು ಹಿಂಸಾಚಾರ ಸಂದರ್ಭ ಹಾಗೂ ಪರಿಸರ ವಿಕೋಪದಿಂದಾಗಿ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾತರಿಗೆ, ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ಕೈದಿಗಳಿಗೆ, ಭಯೋತ್ಪಾದಕ ವಿರೋಧಿ ಚಟುವಟಿಕೆಗಳಿಗೆ, ಗೂಂಡಾ ಕಾಯಿದೆಯಡಿ ಬಂಧಿತರಾಗಿ ಪ್ರಕರಣಗಳು ಸಾಭೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ನಿರಪರಾಧಿಗಳಿಗೆ ಹಾಗೂ ವಿವಿಧ ಸುರಕ್ಷಿತ ಕಾಯಿದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಗೊಂಡ ಅಲ್ಪಸಂಖ್ಯಾತ ನಿರಪರಾಧಿಗಳಿಗೆ ಪುನರ್ವಸತಿಗಾಗಿ ಶೇ. 3 ರ ಬಡ್ಡಿ ದರದಲ್ಲಿ ಗರಿಷ್ಠ ರೂ. 5 ಲಕ್ಷಗಳ ಸಾಲ ಸೌಲಭ್ಯ ಇದರಲ್ಲಿ ಶೇ. 50 ರಷ್ಟು ಸಹಾಯಧನವಿದೆ. ಈ ಯೋಜನೆಯಡಿ ಲಾಭ ಪಡೆಯಲು ವಾರ್ಷಿಕ ಆದಾಯ ರೂ. 6 ಲಕ್ಷದೊಳಗಿರಬೇಕು.
ಪ್ರವಾಸಿ ಸಾಲ ಯೋಜನೆ: ಈ ಯೋಜನೆಯಡಿ ಕೊಲ್ಲಿ ರಾಷ್ಟ್ರಗಳಿಂದ ಹಿಂತಿರುಗಿ ಉದ್ಯೋಗಾವಕಾಶ ವಂಚಿತರಾಗಿರುವ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಸ್ವಯಂ ಉದ್ಯೋಗ ಹೊಂದಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಕೊಲ್ಯಾಟಿಕಲ್ ಭದ್ರತೆ ಆದಾರದಲ್ಲಿ ಗರಿಷ್ಠ ರೂ. 10 ಲಕ್ಷಗಳವರೆಗೆ ಸಾಲವನ್ನು ಶೇ. 5 ರ ಬಡ್ಡಿದರದಲ್ಲಿ ನೀಡಲಾಗುವದು ಹಾಗೂ ನಿಗಮದಿಂದ ಶೇ. 90 ರಷ್ಟು ಸಾಲ, ಇನ್ನುಳಿದ ಶೇ. 10 ರಷ್ಟು ಮೊತ್ತವನ್ನು ಫಲಾನುಭವಿಯೇ ಭರಿಸತಕ್ಕದ್ದು. ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 45 ಹಾಗೂ 55 ವರ್ಷದೊಳಗೆ ವಯೋಮಿತಿಯಿರಬೇಕು. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವದಿಲ್ಲ. ಅರ್ಜಿ ಸಲ್ಲಿಸಲು ಆಧಾರ್ ಪ್ರತಿಯು ಕಡ್ಡಾಯವಾಗಿದೆ. ಈಗಾಗಲೇ ಸಾಲ ಮನ್ನಾ ಆಗಿರುವ ಫಲಾನುಭವಿಗಳಿಗೆ ಹೊಸದಾಗಿ ಸಾಲ ನೀಡಲಾಗುವದಿಲ್ಲ. ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1.03 ಲಕ್ಷಗಳ ಒಳಗಿರಬೇಕು ಹಾಗೂ ವಿದ್ಯಾಭ್ಯಾಸ ಯೋಜನೆಯಡಿ ಗರಿಷ್ಠ ರೂ. 6 ಲಕ್ಷದೊಳಗಿರಬೇಕು.
ಈ ಎಲ್ಲಾ ಯೋಜನೆಗಳನ್ನು ಆನ್ಲೈನ್ ನೋಂದಣಿ ಮಾಡಿದ ನಂತರ ಪ್ರಿಂಟೌಟ್ ತೆಗೆದು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಖುದ್ದಾಗಿ ಸಲ್ಲಿಸುವದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ರಾಮ ಮಂದಿರದ ಹಿಂಭಾಗ, ಹೊಟೇಲ್ ಹಿಲ್-ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. 571201 ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08172-246333 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ತಿಳಿಸಿದ್ದಾರೆ.