ಮಡಿಕೇರಿ, ಜು. 29: ಕ್ರೀಡೆಯಲ್ಲಿನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರಕಾರದಿಂದ ಗುರುತಿಸಲ್ಪಟ್ಟ ದೇಶದ ಬ್ಯಾಡ್‍ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರು ಕ್ರೀಡಾ ಜಿಲ್ಲೆ ಎಂಬ ಖ್ಯಾತಿಯ ಕೊಡಗು ಜಿಲ್ಲೆಯವರು ಎಂಬದು ಜಿಲ್ಲೆಯ ಕ್ರೀಡಾಭಿಮಾನಿ ಗಳಿಗೆ ಹರ್ಷ ತಂದಿದೆ. 2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆದ ಈ ಬಾರಿ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅಶ್ವಿನಿಪೊನ್ನಪ್ಪ ಸೇರಿದಂತೆ ಕೊಡಗಿನ ಮೂಲದವರಾದ ಒಟ್ಟು ಆರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಕರ್ನಾಟಕ ಮೂಲದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಒಟ್ಟು 13 ಕ್ರೀಡಾಪಟುಗಳ ಪೈಕಿ ಆರು ಮಂದಿ ಕೊಡಗು ಮೂಲದ ವರಾಗಿದ್ದರು. ಹಾಕಿಯಲ್ಲಿ ಎಸ್.ವಿ. ಸುನಿಲ್, ಅಥ್ಲೆಟಿಕ್ಸ್‍ನಲ್ಲಿ ಮಾಚೆಟ್ಟಿರ ಆರ್. ಪೂವಮ್ಮ, ಬ್ಯಾಡ್‍ಮಿಂಟನ್ ನಲ್ಲಿ ಅಶ್ವಿನಿಪೊನ್ನಪ್ಪ ಸ್ಕ್ವಾಷ್‍ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ ಹಾಗೂ ಇವರೊಂದಿಗೆ ಹೊಸ ಮುಖಗಳಾಗಿ ಬಾಸ್ಕೆಟ್‍ಬಾಲ್‍ನಲ್ಲಿ ಪಟ್ಟೆಮನೆ ನವನೀತ ಹಾಗೂ ಅಥ್ಲೆಟಿಕ್ಸ್‍ನಲ್ಲಿ ಮತ್ತೊಬ್ಬರಾಗಿ ಕಾರೆಕೊಪ್ಪದ ಜೀವನ್ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದರು.
ಈ ಆರು ಮಂದಿಯ ಪೈಕಿ ಅಶ್ವಿನಿಪೊನ್ನಪ್ಪ ಹಾಗೂ ಜೋತ್ಸ್ನಾ ಚಿಣ್ಣಪ್ಪ ಅವರುಗಳು ಪದಕದ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದ ಸಾಧನೆಗಾಗಿ ಕರ್ನಾಟಕ ರಾಜ್ಯ ಸರಕಾರ ಇದೀಗ ಅಶ್ವಿನಿಪೊನ್ನಪ್ಪ ಅವರಿಗೆ ರೂ. 33 ಲಕ್ಷದ ಪುರಸ್ಕಾರವನ್ನು ನೀಡಿದೆ. ಈ ಪಂದ್ಯಾವಳಿಯಲ್ಲಿ ಅಶ್ವಿನಿಪೊನ್ನಪ್ಪ ತಂಡ ವಿಭಾಗದಲ್ಲಿ ಚಿನ್ನ ಹಾಗೂ ಮಿಕ್ಸೆಡ್ ಡಬಲ್ಸ್‍ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾಳೆ. ಸ್ಕ್ವಾಷ್‍ನಲ್ಲಿ ಜೋತ್ಸ್ನಾ ಚಿಣ್ಣಪ್ಪ ಅವರಿಗೆ ಕಂಚಿನ ಪದಕ ಬಂದಿದೆಯಾದರೂ ಜೋತ್ಸ್ನಾ ಈ ಹಿಂದಿನಿಂದಲೂ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾಳೆ. ತಮಿಳುನಾಡು ಸರಕಾರ ಈ ಹಿಂದಿನಿಂದಲೂ ಜೋತ್ಸ್ನಾ ಮಾಡಿದ ಸಾಧನೆಯನ್ನು ಪರಿಗಣಿಸಿ ಗೌರವ ನೀಡಿತ್ತು. ಆದರೆ, ಅಶ್ವಿನಿ ಈ ತನಕ ಕೇವಲ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾಳೆ.
ಆದರೆ ಈ ತನಕ ರಾಜ್ಯ ಸರಕಾರದಿಂದ ಸಾಕಷ್ಟು ಸಾಧನೆ ತೋರಿರುವ ಅಶ್ವಿನಿಗೆ ಸೂಕ್ತ ಪುರಸ್ಕಾರ ದೊರೆತಿರಲಿಲ್ಲ. ಈ ಹಿಂದೆ ಅಶ್ವಿನಿ ತನ್ನ ಜೋಡಿ ಜ್ವಾಲಾಗುಟ್ಟಾ ಅವರೊಂದಿಗೆ ವಲ್ರ್ಡ್ ಸೀರಿಸ್‍ನಲ್ಲಿ ದೇಶಕ್ಕೆ ಹಲವು ವರ್ಷಗಳ ಸುದೀರ್ಘ ಅಂತರದ ಬಳಿಕ ಕಂಚಿನ ಪದಕ ತಂದುಕೊಟ್ಟಿದ್ದಳು. ಆದರೆ ಆ ಸಂದರ್ಭ ಜ್ವಾಲಾಗುಟ್ಟಾಗೆ ಹೈದರಾಬಾದ್ (ಆಂಧ್ರ) ಸರಕಾರ ರೂ. 25 ಲಕ್ಷ ನಗದು ನೀಡಿತ್ತಾದರೂ ಕರ್ನಾಟಕವನ್ನು ಪ್ರತಿನಿಧಿಸಿಕೊಂಡು ಬಂದಿದ್ದ ಅಶ್ವಿನಿಗೆ ಯಾವದೇ ಪುರಸ್ಕಾರ ಲಭ್ಯವಾಗಿರಲಿಲ್ಲ. ಇದೀಗ ಪ್ರಥಮ ಬಾರಿಗೆ ಎಂಬಂತೆ ಕರ್ನಾಟಕ ಈಕೆಯ ಸಾಧನೆಯನ್ನು ಪರಿಗಣಿಸಿ ರೂ. 33ಲಕ್ಷದ ಗೌರವವನ್ನು ನೀಡಿದೆ.
ತಾಯಿಯ ಹರ್ಷ
ಅಶ್ವಿನಿ ಈ ತನಕ ಹಲವಾರು ಪಂದ್ಯಾವಳಿಗಳನ್ನು ಆಡಿದ್ದರೂ ಕೇವಲ ಕರ್ನಾಟಕವನ್ನು ಮಾತ್ರ ಪ್ರತಿನಿಧಿಸಿದ್ದಾಳೆ. ಇದೀಗ ತಡವಾಗಿಯಾದರೂ ರಾಜ್ಯ ಗೌರವಿಸಿರುವದು ಸಂತಸ ತಂದಿದೆ ಎಂದು ಆಕೆಯ ತಾಯಿ ಕಾವೇರಿ ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದರು. ಮೂಲತಃ ಅಮ್ಮತ್ತಿಯ ಮಾಚಿಮಂಡ ಪೊನ್ನಪ್ಪ ಹಾಗೂ ಕಾವೇರಿ ದಂಪತಿಯ ಪುತ್ರಿ ಅಶ್ವಿನಿ ಇತ್ತೀಚೆಗೆ ಪೊನ್ನಚೆಟ್ಟೀರ ಕರಣ್ ಮೇದಪ್ಪ ಅವರನ್ನು ವಿವಾಹವಾಗಿದ್ದಾರೆ.
ಎರಡು ಒಲಂಪಿಕ್ಸ್
ಅಶ್ವಿನಿ ಪೊನ್ನಪ್ಪ 2012 ಹಾಗೂ 2016ರಲ್ಲಿ ನಡೆದ ಎರಡು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮಾತ್ರವಲ್ಲ ಕೇಂದ್ರ ಸರಕಾರದಿಂದ ಕ್ರೀಡಾ ಸಾಧನೆಗಾಗಿ ನೀಡಲಾಗುವ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. 2010ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಜ್ವಾಲಾಗುಟ್ಟಾ ಅವರೊಂದಿಗೆ ಚಿನ್ನದ ಪದಕ ಹಾಗೂ 2014ರ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕದ ಸಾಧನೆ ಮಾಡಿದ್ದಾರೆ. ತಾ. 26 ರಂದು ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದ ಪುರಸ್ಕಾರ ಸ್ವೀಕರಿಸಿದ ಬಳಿಕ ಚೀನಾದಲ್ಲಿ ನಡೆಯಲಿರುವ ವಲ್ರ್ಡ್ ಚಾಂಪಿಯನ್ ಶಿಪ್‍ಗೆ ತೆರಳಿರುವದಾಗಿ ಅಶ್ವಿನಿ ತಾಯಿ ಕಾವೇರಿ ತಿಳಿಸಿದ್ದಾರೆ.
-ಶಶಿ