ಮಡಿಕೇರಿ, ಜು .29: ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಸ್ಟ್-1 ರಿಂದ 30 ರವರೆಗೆ ನಡೆಯಲಿರುವ ‘ಸ್ವಚ್ಛ ಸರ್ವೇಕ್ಷಣ’ ಕುರಿತು ಜಿಲ್ಲೆಯಲ್ಲಿ ಅರಿವು ಕಾರ್ಯಕ್ರಮ ಜರುಗಲಿದೆ ಎಂದು ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ. ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018”ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಬೃಹತ್ ಪ್ರಮಾಣದಲ್ಲಿ ನಾಗರಿಕರು ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವದು, ಸ್ವಚ್ಛತೆ, ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವದು ಮತ್ತು ನೈರ್ಮಲ್ಯದ ಬಗ್ಗೆ ಮೌಲ್ಯ ಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿಯನ್ನು ನೀಡುವದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್-1 ರಿಂದ 30 ರವರೆಗೆ ಸಮೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಕೂಡ ಈ ಸಮೀಕ್ಷೆ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತು ಉತ್ತಮ ಪರಿಸರ ಕಾಪಾಡಬೇಕಾಗಿದೆ. ಕೇಂದ್ರ ಸರ್ಕಾರವು ಸ್ವಯತ್ತ ಸಂಸ್ಥೆಗಳಿಂದ ಸ್ವಚ್ಛತೆ ಹಾಗೂ ಶೌಚಾಲಯಗಳ ಬಳಕೆ ಬಗ್ಗೆ ಮೌಲ್ಯ ಮಾಪನ ನಡೆಸುವದರಿಂದ ಗ್ರಾಮಗಳಲ್ಲಿರುವ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂತೆ ನಡೆಯುವ ಸ್ಥಳ, ಕುಡಿಯುವ ನೀರು ಸಂಗ್ರಹ ಸ್ಥಳಗಳು, ಪಂಚಾಯತ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸ್ವಚ್ಛತೆ, ಶುಚಿತ್ವವನ್ನು ಕಾಪಾಡಬೇಕಿದೆ ಎಂದರು.
ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಸುಸ್ಥಿತಿಯಲ್ಲಿರು ವಂತೆ ಗ್ರಾ.ಪಂ.ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ವಿದ್ಯಾರ್ಥಿಗಳು/ ಸಾರ್ವಜನಿಕರು/ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿ ಜಾಥಾಗಳನ್ನು/ ಕಾರ್ಯಾಗಾರಗಳನ್ನು/ ಸಭೆಗಳನ್ನು ಯಶಸ್ವಿಗೊಳಿಸಲು ಮಾರ್ಗದರ್ಶನ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.