ಕುಶಾಲನಗರ, ಜು. 31: ಕುಶಾಲನಗರ ಪಟ್ಟಣದ ಹೆದ್ದಾರಿ ಬದಿಯ ಫಾತಿಮಾ ಕಾಂಪ್ಲೆಕ್ಸ್ ಬಳಿಯಿರುವ ಆಟೋ ನಿಲ್ದಾಣ ತೆರವಿಗೆ ಮುಂದಾದ ಪೊಲೀಸ್ ಇಲಾಖೆ ವಿರುದ್ಧ ಚಾಲಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿ ಸದಾ ಗೊಂದಲದ ಗೂಡಾಗಿರುವ ಆಟೋ ನಿಲ್ದಾಣ ತೆರವು ವಿಚಾರ ಸಂಬಂಧ ಮಂಗಳವಾರ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಫಾತಿಮಾ ಕಾಂಪ್ಲೆಕ್ಸ್ ಬಳಿ ನಿಲುಗಡೆಗೊಳ್ಳುತ್ತಿರುವ 50 ಕ್ಕೂ ಅಧಿಕ ಆಟೋಗಳಿಂದ ಸ್ಥಳೀಯ ಮಳಿಗೆಗಳ ವ್ಯಾಪಾರಿಗಳಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂದು ಕೆಲವು ವರ್ತಕರ ದೂರಿನ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಈ ನಿಲ್ದಾಣವನ್ನು ಹೆದ್ದಾರಿಯ ಮತ್ತೊಂದು ಬದಿಗೆ ಸ್ಥಳಾಂತರಿಸು ವಂತೆ ಸೂಚನೆ ನೀಡಿದ್ದರು. ಇದು ಸಮರ್ಪಕವಾಗಿ ಜಾರಿಗೊಳ್ಳದ ಕಾರಣ 15 ದಿನಗಳಿಗೊಮ್ಮೆ ಒಂದೊಂದು ಬದಿಯಲ್ಲಿ ಆಟೋಗಳ ನಿಲುಗಡೆಗೊಳಿಸಲು ಕೂಡ ಸೂಚಿಸಲಾಗಿತ್ತು. ಆದರೆ ಒಂದು ಬದಿಯಲ್ಲಿ ಕೇವಲ 10 ಆಟೋಗಳು ಮಾತ್ರ ನಿಲುಗಡೆಗೊಳ್ಳಲು ಸ್ಥಳಾವಕಾಶ ಇರುವ ಹಿನ್ನೆಲೆಯಲ್ಲಿ ಈ ಚಿಂತನೆಗೆ ಚಾಲಕರು ಸೊಪ್ಪು ಹಾಕದೆ ಯಥಾಸ್ಥಿತಿ ಕಾಯ್ದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.

ಈ ಬೆನ್ನಲ್ಲೇ ನಿಲ್ದಾಣ ತೆರವುಗೊಳಿಸುವಂತೆ ಸೂಚಿಸಲು ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿರುದ್ಧ ಚಾಲಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆಯಿತು. ಯಾವದೇ ಕಾರಣಕ್ಕೂ ಈ ಹಿಂದಿನ ನಿಲ್ದಾಣವನ್ನು ತೆರವುಗೊಳಿಸಲು ಸಾಧ್ಯವಿಲ್ಲವೆಂದು ಆಟೋ ಚಾಲಕರು ಬಿಗಿಪಟ್ಟು ಹಿಡಿದರು.

ಕೂಡಲೇ ಈ ಸಂಬಂಧ ಆಟೋ ಚಾಲಕರು ಮಾಲೀಕರ ಸಂಘದ ಕಚೇರಿಯಲ್ಲಿ ತುರ್ತ ಸಭೆ ನಡೆಯಿತು. ಸಂಘದ ಅಧ್ಯಕ್ಷರಾದ ವಿ.ಪಿ.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಟೋ ನಿಲ್ದಾಣವನ್ನು ಉಳಿಸಿ ಕೊಂಡು ಹೋಗುವ ಸಂಬಂಧ ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳ ಲಾಯಿತು. ಕಳೆದ 35 ವರ್ಷಗಳಿಂದ ಇರುವ ಆಟೋ ನಿಲ್ದಾಣವನ್ನು ಕೆಲವರ ಸ್ವಹಿತಾಸಕ್ತಿಗಾಗಿ ಸ್ಥಳಾಂತರಿ ಸಲು ಚಿಂತನೆ ನಡೆಯುತ್ತಿದೆ. ಈಗಿರುವ ನಿಲ್ದಾಣದ ಯಥಾಸ್ಥಿತಿ ಕಾಪಾಡಬೇಕು. ಸ್ಥಳಾಂತರಕ್ಕೆ ಒತ್ತಡ ಹೇರಿದಲ್ಲಿ ಪಟ್ಟಣದ ಆಟೋಗಳ ಸಂಚಾರ ಸ್ಥಗಿತಗೊಳಿಸಿ ಉಗ್ರ ಹೋರಾಟ ಕೈಗೊಳ್ಳುವದಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಾಹನ ನಿಲುಗಡೆ ಕೇಂದ್ರಗಳ ಮಾರ್ಪಾಡಿಗೆ ಸಂಚಾರಿ ಪೊಲೀಸ್ ಇಲಾಖೆ ಮೂಲಕ ಯೋಜನೆ ರೂಪಿಸಲಾಗಿದೆ. ಇದಕ್ಕೆ ಎಲ್ಲಾ ವಾಹನ ಸವಾರರು ಸಹಕರಿಸುವಂತೆ ಸಂಚಾರಿ ಠಾಣಾಧಿಕಾರಿ ನವೀನ್‍ಗೌಡ ಪತ್ರಿಕೆ ಮೂಲಕ ಕೋರಿದ್ದಾರೆ. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ಯೋಗೇಶ್, ಪದಾಧಿಕಾರಿಗಳಾದ ಜವರ, ಮಂಜು, ಕಿಟ್ಟಿ ಮತ್ತಿತರರು ಇದ್ದರು.