ಸೋಮವಾರಪೇಟೆ, ಜು. 29: ಪ್ರಸಕ್ತ ವರ್ಷ ಭಾರೀ ಮಳೆಯಾಗಿರುವ ಹಿನ್ನೆಲೆ ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೊನ್ನಮ್ಮನ ಕೆರೆ ಜುಲೈ ತಿಂಗಳಿನಲ್ಲೇ ಭರ್ತಿಯಾಗಿದೆ.
ದಾಖಲೆ ಪ್ರಕಾರ ಸುಮಾರು 19 ಏಕರೆ ವಿಸ್ತೀರ್ಣದ ಹೊನ್ನಮ್ಮನ ಕೆರೆ ಕೆಲವರಿಂದ ಒತ್ತುವರಿಯಾಗಿದ್ದು, ಇದೀಗ 14 ಏಕರೆಯಷ್ಟು ಪ್ರದೇಶ ಹೊಂದಿದೆ. ಸಾಧಾರಣವಾಗಿ ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗುತ್ತಿದ್ದ ಈ ಕೆರೆ, ಪ್ರಸಕ್ತ ಸಾಲಿನ ಭಾರೀ ಮಳೆಗೆ ಜುಲೈ 2ನೇ ವಾರದಲ್ಲೇ ತುಂಬಿ ರಸ್ತೆಯ ಮೇಲೆ ಹರಿದಿದೆ.
ದೊಡ್ಡಮಳ್ತೆ ಮತ್ತು ಸುಳಿಮಳ್ತೆ ಗ್ರಾಮ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಹರಿದುಬರುತ್ತಿದ್ದು, ಕೆರೆಗೆ ನಿರ್ಮಿಸಲಾಗಿರುವ ಎಲ್ಲಾ ಮೆಟ್ಟಿಲುಗಳು ಮುಳುಗಿವೆ. ಕೆರೆಯ ದಂಡೆಯ ಮೇಲೆ ಶ್ರೀ ಹೊನ್ನಮ್ಮತಾಯಿ ಮತ್ತು ಬಸವೇಶ್ವರ ದೇವಾಲಯವಿದೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ರೂಪುಗೊಂಡಿರುವ ಹೊನ್ನಮ್ಮನ ಕೆರೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ತಾಲೂಕಿನಲ್ಲಿಯೇ ಅತ್ಯಂತ ವಿಸ್ತಾರವಾದ ಕೆರೆ, ಪಕ್ಕದಲ್ಲಿಯೇ ಇರುವ ಗವಿಬೆಟ್ಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಗ್ರಾಮೋದ್ಧಾರಕ್ಕೆಂದು ಕೆರೆಗೆ ಹಾರವಾದ ಹೊನ್ನಮ್ಮ ಅವರ ಹೆಸರಿನಲ್ಲಿಯೇ ಕರೆಯಲ್ಪಡುವ ಕೆರೆಗೆ ಪ್ರತಿವರ್ಷ ಸ್ವರ್ಣಗೌರಿ ಹಬ್ಬದಂದು ವಿಶೇಷವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯ ಅನೇಕ ದಶಕಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ.