ಕೂಡಿಗೆ, ಜು. 31: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿ ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಹತ್ತಕ್ಕೂ ಹೆಚ್ಚು ದನಗಳು ನಾಪತ್ತೆಯಾಗಿವೆ. ಈ ಭಾಗದಲ್ಲಿ ದನಗಳ ಕಳ್ಳತನ, ನಾಪತ್ತೆಗಳು ಆಗಿಂದಾಗ್ಗೆ ನಡೆಯುತ್ತವೆ. ದನಗಳನ್ನು ಸಮೀಪದ ಅರಣ್ಯಕ್ಕೆ ಮೇಯಲು ಗ್ರಾಮಸ್ಥರು ಬಿಡುತ್ತಾರೆ. ಕೆಲವು ದನಗಳು ಕೂಟ್ಟಿಗೆಗೆ ಬಾರದೆ ಹಾರಂಗಿಯ ಅಣೆಕಟ್ಟೆಯ ಎದುರು ಇರುವ ಖಾಲಿ ಪ್ರದೇಶದಲ್ಲಿ ರಾತ್ರಿಯ ಸಮಯ ಮಲಗುತ್ತವೆ. ದನಕಳ್ಳರು ಈ ಸಮಯ ಸಾಧಿಸಿ ದನಗಳನ್ನು ಸಾಗಾಟ ಮಾಡಿ ಬೇರೆಡೆಗೆ ಮಾರಾಟ ಮಾಡುತ್ತಿರಬಹುದೆಂದು ಈ ಭಾಗದ ರೈತರು ಆತಂಕ ಹಾಗೂ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕೊಟ್ಟಿಗೆಯಲ್ಲಿ ಕಟ್ಟಿದ ರೂ. 50 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹಾಲು ಕರೆಯುವ ಹಸುಗಳ ಕಳ್ಳತನವಾಗಿದೆ. ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಜೀವನೋಪಾಯಕ್ಕಾಗಿ ಸಾಕಿದ ದನಗಳು ಕಳ್ಳತನವಾಗುತ್ತಿರುವದರಿಂದ ಸಂಕಷ್ಟ ಎದುರಾಗಿದೆ ಎಂದು ಚಿಕ್ಕತ್ತೂರಿನ ಸಣ್ಣಪ್ಪ, ಹಾರಂಗಿಯ ಪುಟ್ಟ, ಸಣ್ಣವ್ವ. ಮಂಜಣ್ಣ, ರಾಮಯ್ಯ ಸೇರಿದಂತೆ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.