ಮಡಿಕೇರಿ, ಜು. 29: ಮಂಜಿನ ನಗರಿ ಮಡಿಕೇರಿಯಲ್ಲಿರುವ ಇಂದು ಅಪರೂಪದ ಕಾರ್ಯಕ್ರಮ. ಪ್ರಸಕ್ತ ವರ್ಷದ ಮಳೆಗಾಲದ ತೀವ್ರತೆಯ ನಡುವೆ ಬಂದಿರುವ ಕಕ್ಕಡ ಮಾಸ (ಆಟಿ ತಿಂಗಳ)ದ ಈ ದಿನದಂದು ಮಡಿಕೇರಿ ಕೊಡವ ಸಮಾಜದ ಆವರಣದಲ್ಲಿ ಘಮ ಘಮಿಸಿದ ಸ್ವಾದಿಷ್ಟವಾದ ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿನ ಖಾದ್ಯಗಳು ಎಲ್ಲರ ಬಾಯಲ್ಲಿ ನೀರೂರಿಸುವಂತೆ ಮಾಡಿತ್ತು. ಮಾತ್ರವಲ್ಲ ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದ ನಡುವೆ ಮೈ ಬಿಸಿ ಮಾಡುವಂತಿದ್ದ ಆಹಾರಗಳನ್ನು ಎಲ್ಲರಿಗೂ ಪರಿಚಯಿಸಿತಲ್ಲದೆ, ಇದರ ಸವಿ ಎಲ್ಲರೂ ಬಾಯಿ ಚಪ್ಪರಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಜಿಲ್ಲೆಯಲ್ಲಿ ಸಿಗುವ ವಿವಿಧ ಕಾಯಿ ಪಲ್ಯಗಳನ್ನು ಒಳಗೊಂಡ ಸಾರು, ಮಾಂಸದ ಸಾರು, ಚಟ್ನಿ, ಉಪ್ಪಿನಕಾಯಿಯ ವೈವಿಧ್ಯತೆಯೊಂದಿಗೆ ಹಲವು ಬಗೆಯ ತಿಂಡಿಗಳು ಇಲ್ಲಿ ಮೇಳೈಸಿತು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಆಶ್ರಯದಲ್ಲಿ ಕೊಡವ ಸಮಾಜದಲ್ಲಿ ಇಂದು ಆಯೋಜಿತಗೊಂಡಿದ್ದ ಅಪರೂಪದ ಕಾರ್ಯಕ್ರಮವಾದ ‘ಕೊಡವ ತೀನಿನಮ್ಮೆ’ ಸಾಂಪ್ರದಾಯಿಕವಾದ ಅಡುಗೆಯನ್ನು ಪರಿಚಯಿಸಿತಲ್ಲದೆ ಇದರ ಸವಿಯನ್ನೂ ಅನುಭವಿಸುವ ಅವಕಾಶದೊಂದಿಗೆ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡಿದ್ದರು.‘ಕೊಡವ ತೀನಿ ನಮ್ಮೆ’ ಬಗೆ ಬಗೆಯ ಖಾದ್ಯಗಳ ಪೈಪೋಟಿ ಹಾಗೂ ಪ್ರದರ್ಶನದೊಂದಿಗೆ ಜರುಗಿತು. ಪುಟ್ಟ್ (ಹಿಟ್ಟು) ವಿಭಾಗದಲ್ಲಿ ಮರಕೇಂಬುಪುಟ್ಟ್, ಕೂವಲೆ ಪುಟ್ಟ್, ಬೆರಂಬುಟ್ಟ್, ಕರ್ಜಿಕಾಯಿ, ಬಾಳೆನುರ್‍ಕ್, ಚಿಟಾಣಿಪುಟ್ಟ್, ಚೀಕಲ್‍ಪುಟ್ಟ್, ಅಡಿಕೆಪುಟ್ಟ್, ಬಡವಕಜ್ಜಾಯ, ಬೂಕ್ ಕಜ್ಜಾಯಗಳು ಗಮನ ಸೆಳೆದವು. ಬೈಂಬಳೆ ಕರಿ, ಪನೆಕಂಡೆಕರಿ, ಕುರುಕರಿ, ಕಾಡ್‍ಮಾಂಗೆ, ಕೇಂಬುಕರಿಗೆ ಒಣಕ್ ಯರ್ಚಿ ಕರಿ, ಕೊಯಿಲೆ ಮೀನ್, ಕಕ್ಕಳೆ ಞಂಡ್, ಕೋಳಿಕರಿ, ಪಂದಿಕರಿಯ ‘ಸಾಥ್’ ಇತ್ತು
ಇದರೊಟ್ಟಿಗೆ ಚೆಕ್ಕೆಕುರುಪಜ್ಜಿ, ಕೈಪುಳಿಪಜ್ಜಿ, ಸುಂಟಿಪಜ್ಜಿ, ಕೆಂಜರಿಸುಳಿ, ಮುದ್‍ರೆ ಪಜ್ಜಿ ಬಾಯಿ ಚಪ್ಪರಿಸುವಂತಿತ್ತು. ಅಂಬಟೆಪಾರ, ಚೋರಂಗೆ ಪಾರ, ಕೈಪುಳಿಪಾರ, ಒಡಪುಳಿ ಪಾರ, ಮಾಂಗೆ ಪಾರದ ‘ಚೋದ್’ (ಉಪ್ಪಿನಕಾಯಿಯ ರುಚಿ) ತೀನಿ ನಮ್ಮೆಗೆ ಇಂಬು ನೀಡಿತು.
ಖಾದ್ಯಗಳ ವಿಚಾರ ಒಂದೆಡೆ ಯಾದರೆ ಕೊಡವ ಸಾಂಪ್ರದಾಯಿಕ ಅಡುಗೆ ಪದ್ಧತಿ, ಪದಾರ್ಥ, ಬಳಸುವ ಸಾಮಗ್ರಿ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮವೂ ನೆರೆದಿದ್ದವರಿಗೆ ಜ್ಞಾನದೊಂದಿಗೆ ಮುದ ನೀಡಿತು. ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಮಹಿಳೆಯರು ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ನಾಮುಂದು, ತಾಮುಂದು
(ಮೊದಲ ಪುಟದಿಂದ) ಎಂಬಂತೆ ಆಸಕ್ತಿ ತೋರಿದರು. ಈ ಸಂದರ್ಭ ಇತರ ಮಹಿಳೆಯರಿಂದ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹವೂ ಕಂಡು ಬಂದಿತು.
ಸ್ಥಳೀಯ ಆಹಾರ ಬಳಸಿ : ವೀಣಾ ಕರೆ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಪ್ರಸ್ತುತ ಯುವಜನತೆಯಲ್ಲಿ ಹಿಂದಿನ ಕಾಲದ ತಿನಿಸುಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದಂತಾಗಿದೆ. ಈಗಿನ ಸಮಾಜ ‘ಫಾಸ್ಟ್ ಫುಡ್’ ಜೀವನಕ್ಕೆ ಒಗ್ಗಿದಂತಾಗಿರುವದು ವಿಷಾದಕರ. ಇದರಿಂದ ಸಹಜವಾಗಿ ವಿವಿಧ ರೋಗಗಳು ಕೂಡ ಚಿಕ್ಕವಯಸ್ಸಿ ನಿಂದಲೇ ಬರುವಂತಾಗಿದೆ ಎಂದರು. ಈ ಹಿಂದೆ ಮನೆಯ ಸುತ್ತ ಮುತ್ತಲು, ತೋಟಗಳಲ್ಲಿ ತರಕಾರಿ ಹಣ್ಣುಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿತ್ತು. ಇಂತಹ ಪದಾರ್ಥಗಳ ಸೇವನೆಯಿಂದ ಆರೋಗ್ಯವೂ ಸದೃಢವಾಗಲಿದ್ದು, ಸ್ಥಳೀಯ ಆಹಾರ ಅಡುಗೆ ಸೇವಿಸುವಂತೆ ಅವರು ಕರೆ ನೀಡಿದರು.
ಕೊಡವ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರು ಅನಿಸಿಕೆ ವ್ಯಕ್ತಪಡಿಸಿ, ಈಗಿನ ಪೀಳಿಗೆಗೆ ಸಾಂಪ್ರದಾಯಿಕ ಅಡುಗೆ ಪದ್ಧತಿಯ ಕುರಿತಾಗಿ ಹೆಚ್ಚಿನ ಅರಿವು ಇಲ್ಲ. ಈ ನಿಟ್ಟಿನಲ್ಲಿ ಇದನ್ನು ಪರಿಚಯಿಸಲು ಅಕಾಡೆಮಿ ಪ್ರಯತ್ನ ನಡೆಸುತ್ತಿದೆ. ಯುವ ಜನಾಂಗದವರು ಇದನ್ನು ಆಸಕ್ತಿಯಿಂದ ತಿಳಿದುಕೊಳ್ಳುವಂತಾಗ ಬೇಕು ಎಂದರು.
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಕೊಡವರಲ್ಲಿ ಮೇಲ್ವರ್ಗದವರಾಗಲಿ ಅಥವಾ ಕೆಳವರ್ಗದವರಾಗಲಿ ಎಲ್ಲರೂ ಗಾಂಭೀರ್ಯದಿಂದ ಬದುಕುತ್ತಾರೆ. ಕೊಡವರು ಆಯಾ ಋತುವಿಗೆ ತಕ್ಕಂತೆ ಹಲವಾರು ತಿನಿಸುಗಳನ್ನು ತಯಾರಿಸುತ್ತಾರೆ. ಮರ, ಬಳ್ಳಿ, ನೀರು, ತೋಡು, ಗದ್ದೆ, ಬಾಣೆಗಳಲ್ಲಿ ವಿವಿಧ ರೀತಿಯ ಹಣ್ಣು-ತರಕಾರಿಗಳು ದೊರೆಯುತ್ತಿತ್ತು. ಆದರೆ ಇದೀಗ ಅವುಗಳೆಲ್ಲಾ ಕಣ್ಮರೆಯಾಗುತ್ತಾ ಹೋಗುತ್ತಿದೆ. ಅಂತಹ ಸ್ಥಳಗಳಲ್ಲಿ ಬೃಹತ್ ಕಟ್ಟಡಗಳು ತಲೆಎತ್ತಿವೆ. ಹಾಗಾಗಿ ಅಂದಿನ ಆಹಾರ ಪದ್ಧತಿ ಇಂದು ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಈ ಸಂದರ್ಭ ಕೊಡವ ಅಕಾಡೆಮಿಯಿಂದ ‘ಪೊಂಗುರಿ’ ಪುಸ್ತಕದ 3 ತಿಂಗಳ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕೊಡಗು ಕೃಷಿಗೆ ಹೆಸರುವಾಸಿಯಾದ ಜಿಲ್ಲೆ. ಕೃಷಿಕರು ಮಳೆಗಾಲದಲ್ಲಿ ಗದ್ದೆಯನ್ನು ಉಳುಮೆ ಮಾಡಿ, ಭತ್ತ ಬೆಳೆಯುವಲ್ಲಿ ನಿರತರಾಗಿ ದಣಿದಿರುತ್ತಿದ್ದರು. ಅದರಿಂದ ಸುಧಾರಿಸಿಕೊಳ್ಳಲು ಕಕ್ಕಡ ಸಮಯದಲ್ಲಿ ಆಟಿ ಪಾಯಸ, ನಾಟಿ ಕೋಳಿ ಸಾರು ತಿಂದರೆ ಕುಗ್ಗಿ ಹೋದ ದೇಹ ಸರಿಯಾಗುತ್ತಿತ್ತು. ಅಂದಿನ ಪದ್ಧತಿಗಳನ್ನು ಮತ್ತೊಮ್ಮೆ ನೆನಪು ಮಾಡುವ ಹಾಗೂ ಮುಂದುವರಿಸಿ ಕೊಂಡು ಹೋಗುವ ಉದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಮಾತನಾಡಿ, ಹಲವಾರು ಕಡೆಗಳಲ್ಲಿ ಈ ರೀತಿಯ ಆಚರಣೆಗಳು ನಡೆಯುತ್ತಿದೆ. ಆದರೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆ. ಬೇಸಿಗೆಯಲ್ಲಿ ಮನೆಯಲ್ಲಿ ಬೆಳೆದ ಹಣ್ಣುಗಳಿಂದ ತಂಪು ಪಾನೀಯ ಮಾಡಿ ಸೇವಿಸುವದರಿಂದ ದೇಹ ತಂಪಾಗಿ ಆರೋಗ್ಯವಾಗಿರುತ್ತದೆ. ತೋಟಗಳಲ್ಲಿ ಸಿಗುವ ತರಕಾರಿಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸುವದರಿಂದ ಖಾಯಿಲೆ ಬರುವದಕ್ಕೆ ಮುಂಚೆಯೇ ತಡೆಯಬಹುದು ಎಂದು ಸಲಹೆ ನೀಡಿದರು.
ಸಮಾಜ ಸೇವಕಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ ಮಾತನಾಡಿ, ಕೊಡಗಿನ ಆಚಾರ-ವಿಚಾರ, ಸಂಸ್ಕøತಿಯನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಹಿಂದಿನ ಕಾಲದವರಂತೆ ನಾಟಿ ಔಷಧಿಯನ್ನು ಬಳಸಬೇಕು. ಮನೆಯ ಸುತ್ತಮುತ್ತ, ಕಾಡಿನಲ್ಲಿ ದೊರಕುವ ಮದ್ದಿನ ಗಿಡಗಳಿಂದ ಔಷಧಿ ತಯಾರಿಸಿ ಉಪಯೋಗಿಸಬೇಕು. ಇದರಿಂದ ಸಂಪೂರ್ಣ ಗುಣಮುಖರಾಗಿ ಆರೋಗ್ಯ ವಂತರಾಗಿರಬಹುದು ಎಂದರು. ಅಕಾಡೆಮಿ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾದೇಟಿರ ಪ್ರಮೀಳಾ ಜೀವನ್ ಹಾಗೂ ತಂಡದವರು ಪ್ರಾರ್ಥಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಪಳಂಗಂಡ ಸಬಿತಾ ವಂದಿಸಿ, ಆಂಗೀರ ಕುಸುಮ್ ಹಾಗೂ ಕೂಪದಿರ ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಕೊಡವ ಅಕಾಡೆಮಿಯ ಸದಸ್ಯರು ಹಾಗೂ ಪೊಮ್ಮಕ್ಕಡ ಒಕ್ಕೂಟದ ಸದಸ್ಯರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ವೀಣಾ ಅಚ್ಚಯ್ಯ ಸೇರಿದಂತೆ ಉದ್ಘಾಟನಾ ಕಾರ್ಯ ಕ್ರಮದ ಅತಿಥಿಗಳೊಂದಿಗೆ ಬೊಟ್ಟೋಳಂಡ ನೈಲಾ ಅಯ್ಯಣ್ಣ ಹಾಗೂ ಉದ್ಯಮಿ ಕುಂಡ್ಯೋಳಂಡ ದಿನೇಶ್ ಹಾಜರಿದ್ದರು. ಅಕಾಡೆಮಿ ಸದಸ್ಯ ಬೊಳ್ಳಜೀರ ಅಯ್ಯಪ್ಪ ಸ್ವಾಗತಿಸಿದರು. ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ತೀನಿನಮ್ಮೆ ಕುರಿತಾಗಿ ರಚಿಸಿದ ಕವನವನ್ನು ದೇಚಮ್ಮ ಅಯ್ಯಪ್ಪ ವಾಚಿಸಿದರು. ಬೊಳ್ಳಜೀರ ಯಮುನಾ ಅಯ್ಯಪ್ಪ ವಿಜೇತರ ಪಟ್ಟಿ ನೀಡಿದರೆ, ಪೊಮ್ಮಕ್ಕಡ ಕೂಟದ ಚೋಕೀರ ಅನಿತಾ ದೇವಯ್ಯ ವಂದಿಸಿದರು.