*ಗೋಣಿಕೊಪ್ಪ, ಜು. 30 : ಜಿಲ್ಲೆಯಲ್ಲಿ ಪ್ರವಾಸಿಗರ ಹೆಸರಿನಲ್ಲಿ ಬಂದು ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು ಬಹುತೇಕ ಶಿಕ್ಷಣ ಸಂಸ್ಥೆಗಳ ಮುಂಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಇದರಿಂದ ಯುವಕರು ಹಾದಿ ತಪ್ಪುತ್ತಿದ್ದಾರೆ ಯುವಕರ ಭವಿಷ್ಯ ರೂಪಿಸುವದು ಪ್ರತಿಯೊಬ್ಬರ ಕರ್ತವ್ಯ. ಗಾಂಜಾ (ಮೊದಲ ಪುಟದಿಂದ) ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡಬೇಕು ಎಂದು ಮನವಿ ಮಾಡಿದರು.

ಮಳೆ ತೀವ್ರತೆಯಿಂದ ಜಿಲ್ಲಾದ್ಯಂತ ಅಪಾರ ಹಾನಿ ಸಂಭವಿಸಿದೆ ಮನೆ ಹಾನಿ ಕೃಷಿ ತೋಟ ಗದ್ದೆಗಳ ಫಸಲು ನಾಶ ಸೇರಿದಂತೆ ರಸ್ತೆಗಳು ಹಾಳಾಗಿದೆ. ಅಧಿಕಾರಿಗಳು ಸೂಕ್ತ ಮಾಹಿತಿ ಪಡೆದು ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಸಭೆಗೆ ಹಾಜರಾಗುವ ಅಧಿಕಾರಿಗಳು ತಮ್ಮ ಇಲಾಖೆಯ ಪೂರ್ಣ ಮಾಹಿತಿ ತಿಳಿಯದೇ ತಪ್ಪು ವರದಿ ಒಪ್ಪಿಸಿ ಹಾದಿ ತಪ್ಪಿಸಲು ಪ್ರಯತ್ನಿಸದೆ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಗಮನ ಹರಿಸಿ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ಹೇಳಿದರು. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡುವಂತೆ.ಇ.ಒ. ಜಯಣ್ಣ ಅವರಿಗೆ ಸೂಚಿಸಿದರು.

ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ಜಿಲ್ಲೆಗೆ ಮಾರಕವಾದ ಸಂಸ್ಥೆಯಾಗಿವೆ. ಈ ಎರಡು ಸಂಸ್ಥೆಗಳಿಂದ ಬಹುತೇಕ ಕಾಮಗಾರಿಗಳು ಅಪೂರ್ಣಗೊಂಡು ಅಭಿವೃದ್ಧಿ ಕುಂಟಿತವಾಗುತ್ತಿದೆ. ಈ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯ ಪ್ರಥ್ಯು ಒತ್ತಾಯಿಸಿದರು. ಇದಕ್ಕೆ ಸಭಾ ಅಧ್ಯಕ್ಷತೆ ವಹಿಸಿದ ಶಾಸಕರು ಸಂಸ್ಥೆಯ ವಿರುದ್ಧ ಕಳಪೆ ಕಾಮಗಾರಿಗಳು ನಡೆದಿದೆ ಎಂದು ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲು ವರದಿ ಸಲ್ಲಿಸುವಂತೆ ಸೂಚಿಸಿದರು.

ಮಳೆ ಪರಿಹಾರಕ್ಕಾಗಿ ನೂರಾ ಹದಿನಾಲ್ಕು ಅರ್ಜಿಗಳು ಮಾತ್ರ ಬಂದಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ ಮಾಹಿತಿ ನೀಡಿದರು. ಎಲ್ಲರಿಗೂ ಸಮಾನವಾದ ಪರಿಹಾರ ನೀಡಬೇಕು ರೈತರನ್ನು ಖುದ್ದು ಭೇಟಿ ಮಾಡಿ ಪರಿಶೀಲನೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಒತ್ತಾಯಿಸಿದರು.

ಕಳೆದ ಬಾರಿ ವಿತರಿಸಿದಂತೆ ಈ ಬಾರಿಯು ಭತ್ತದ ಬೀಜ ವಿತರಣೆಯಲ್ಲಿ ಗುಣಮಟ್ಟವಿಲ್ಲ. ಒಂದು ಏಕರೆಗೆ ಮೂರು ಕ್ವಿಂಟಾಲ್ ಬೀಜ ಬಿತ್ತನೆ ಮಾಡಿದರೂ ಪೈರು ಪೂರೈಕೆಯಾಗುತ್ತಿಲ್ಲ. ಬಿತ್ತನೆ ಬೀಜ ಕಳಪೆ ಮಟ್ಟದ್ದಾಗಿದೆ ಎಂದು ಜಿ.ಪಂ. ಸದಸ್ಯ ಶಶಿ ಸುಬ್ರಮಣಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಪರೀಕ್ಷೆಗೆ ಒಳಪಡಿಸಿ ಬೀಜ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಸಭೆಗೆ ಯಾವದೇ ಮಾಹಿತಿ ನೀಡಲು ಮುಂದಾಗದೆ ಬೆಳೆಗಾರರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಮತ್ತು ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ವಿಫಲರಾಗುತ್ತಿದ್ದಾರೆ ಎಂಬ ಸದಸ್ಯರುಗಳ ಆರೋಪಕ್ಕೆ ಶಾಸಕರು ಅಧಿಕಾರಿಯ ವಿರುದ್ಧ ಗರಂ ಆದರು. ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ಸೂಚಿಸಿದರು.

ಮಳೆ ಪರಿಣಾಮ ಚೆಸ್ಕಾಂ ಇಲಾಖೆಗೆ ತಾಲೂಕಿನಲ್ಲಿ ಸುಮಾರು 24 ಲಕ್ಷದ 80 ಸಾವಿರ ರೂ. ನಷ್ಟ ಸಂಭವಿಸಿದೆ. 405 ಕಂಬ ನೆಲಕ್ಕುರುಳಿದ್ದು 65 ಟ್ರಾನ್ರ್ಸ್ ಫಾರಂ ದುರಸ್ತಿಗೆ ಬಂದಿದ್ದು ಪೂರ್ಣ ದುರಸ್ತಿ ಕಾರ್ಯ ನಡೆದಿದೆ ಎಂದು ಚೆಸ್ಕಾಂ ಸಹಾಯಕ ಇಂಜಿನೀಯರ್ ಅಂಕಯ್ಯ ಮಾಹಿತಿ ನೀಡಿದರು.

ಕಂದಾಯ ಇಲಾಖೆಯಲ್ಲಿ ಸರಿಪಡಿಸಲಾಗದ ಲೋಪಗಳು ನಡೆಯುತ್ತಿದೆ. ಕಾಳುಮೆಣಸು ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಆರ್.ಟಿ.ಸಿ.ಯಲ್ಲಿ ಕಾಳುಮೆಣಸು ಬೆಳೆ ದಾಖಲಾಗುತ್ತಿಲ್ಲ ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಆರೋಪಿಸಿದರು.ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಸಮಸ್ಯೆ ಸರಿಪಡಿಸುವದಾಗಿ ಮಾಹಿತಿ ನೀಡಿದರು. 1070 ಹಕ್ಕು ಪತ್ರಗಳು ವಿತರಿಸಲು ಪರಿಷ್ಕರಣೆ ನಡೆಯುತ್ತಿದೆ ಮತ್ತು ಮತದಾರರ ಚೀಟಿಗೆ ಹೆಸರು ಸೇರ್ಪಡಿಸಲು ಅರ್ಜಿ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು ಈ ಅಧಿಕಾರಿಯಿಂದ ಪಂಚಾಯಿತಿ ಆಡಳಿತ ಹದಗೆಡುತ್ತಿದೆ, ಕಸ ವಿಲೇವಾರಿ ಸಮಸ್ಯೆ ಪೌರ ಕಾರ್ಮಿಕರ ವಸತಿ ನಿರ್ಮಾಣ ವಿದ್ಯುತ್ ಬಿಲ್ ಪಾವತಿಸದೆ ಇರುವದು ಕಂದಾಯ ವಸೂಲಿಯಲ್ಲಿ ನಿಧಾನಗತಿ ಸಾಧನೆ ಕಾಣುತ್ತಿದೆ. ಇಂತಹ ಅಧಿಕಾರಿಯನ್ನು ಉಳಿಸಿಕೊಂಡರೆ ಪಂಚಾಯಿತಿ ಅಭಿವೃದ್ಧಿ ಸಾದ್ಯವಿಲ್ಲ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಆರೋಪಿಸಿದರು. ಬಸವ ವಸತಿ, ಇಂದಿರಾ ಆವಾಸ್, ಯೋಜನೆಗಳಿಂದ ನಿರ್ಮಾಣವಾಗುವ ಗಿರಿಜನರ ಮನೆಗಳ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ ಎಂದು ಜಿ.ಪಂ. ಸದಸ್ಯ ಮುಕ್ಕಾಟಿರ ಶಿವುಮಾದಪ್ಪ ಆರೋಪಿಸಿದರು.

ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಸ್ಮಿತಾಪ್ರಕಾಶ್,ಉಪಾಧ್ಯಕ್ಷ ನೆಲ್ಲಿರ ಚಲನ್, ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನೀತ್, ಜಿ.ಪಂ. ಸದಸ್ಯರುಗಳಾದ ಶ್ರೀಜಾಸಾಜಿ,ವಿಜು ಸುಬ್ರಮಣಿ, ಅಚ್ಚಪಂಡ ಮಹೇಶ್,ಶಶಿ ಸುಬ್ರಮಣಿ, ಬಿ.ಎಲ್.ಪ್ರಥ್ವಿ, ಶಿವಮಾದಪ್ಪ, ಕಾರ್ಯ ನಿರ್ವಾಹಣಾ ಅಧಿಕಾರಿ ಜಯಣ್ಣ, ತಹಶೀಲ್ದಾರ್ ಗೋವಿಂದರಾಜು ಹಾಗೂ ತಾ.ಪಂ. ಸದಸ್ಯರುಗಳು ಗ್ರಾ.ಪಂ. ಅದ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

-ಚಿತ್ರ, ವರದಿ: ಎನ್.ಎನ್.ದಿನೇಶ್