ವೀರಾಜಪೇಟೆ, ಜು. 31: ಚಿನ್ನ-ಬೆಳ್ಳಿ ಉದ್ಯಮ ಇಂದು ಆತಂಕಕಾರಿ ಬೆಳವಣಿಗೆ ತಲಪಿದೆ. ಹಿಂದೆ ಇದ್ದ ಮುಕ್ತ ಉದ್ಯಮಕ್ಕೆ ವಿವಿಧ ಹಂತಗಳಲ್ಲಿ ಸರಕಾರಗಳ ನಿರ್ಬಂಧ, ಉದ್ಯಮಕ್ಕೆ ಕೆಲಸಗಾರರ ಕೊರತೆ, ಕಳ್ಳ ಕಾಕರ ಮೂಲಕ ಚಿನ್ನ-ಬೆಳ್ಳಿ ವರ್ತಕರಿಗೆ ಕಿರುಕುಳವಾಗುತ್ತಿರುವದರಿಂದ ದಶಕಗಳ ಹಿಂದಿನ ಪ್ರತಿಷ್ಠಿತ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಮಂಗಳೂರು ಕೊಂಕಣಿ ಸಾಂಸ್ಕøತಿಕ ಸಂಘದ ಅಧ್ಯಕ್ಷ ಅರುಣ್ ಜಿ. ಶೇಟ್ ಹೇಳಿದರು.

ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಉದ್ಘಾಟಿಸಿದ ಅರುಣ್ ಶೇಟ್, ಚಿನ್ನ ಬೆಳ್ಳಿ ಉದ್ಯಮದ ಕೆಲಸಗಾರರು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು ಕೆಲಸವನ್ನು ತ್ಯಜಿಸುತ್ತಿದ್ದಾರೆ ಎಂದರು. ಇದರಿಂದ ಚಿನ್ನಬೆಳ್ಳಿ ವರ್ತಕರು ಸಂಕಷ್ಟವನ್ನು ಎದುರಿಸಬೇಕಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಕೌಶಲ್ಯದಿಂದ ಕೆಲಸಗಾರರ ವೃತ್ತಿಗೂ ಪೆಟ್ಟಾಗಿದೆ. ವರ್ತಕರು ತನ್ನ ನಿರ್ದಿಷ್ಟ ಆದಾಯದೊಂದಿಗೆ ಮುನ್ನಡೆದರೆ ಮಾತ್ರ ಕೆಲಸಗಾರರ ಕಲ್ಯಾಣ ಸಾಧ್ಯ ಎಂದರು.

ಕೊಡಗು ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ, ಸಂಘದ ಸ್ಥಾಪನೆ ಸುಲಭ ಆದರೆ ಅದನ್ನು ಪೋಷಿಸಿ ಬೆಳೆಸುವದು ಕಷ್ಟ. ನಿಷ್ಠಾವಂತ ಪ್ರಾಮಾಣಿಕತೆಯ ಆಡಳಿತ ಮಂಡಳಿ ಇದ್ದರೆ ಸಂಘಟನೆಯ ಬೆಳವಣಿಗೆ ಪ್ರಗತಿ ಸಾಧ್ಯ. ತಾಲೂಕು ಸಂಘಟನೆ ಆರಂಭದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದು ಇಂದು ಚುರುಕಾಗಿ ಪ್ರಗತಿಯತ್ತ ಸಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಮಾತನಾಡಿ, ಸಂಘ ಚಿನ್ನ-ಬೆಳ್ಳಿ ವರ್ತಕರ, ಕೆಲಸಗಾರರ ಕ್ಷೇಮಾಭಿವೃದ್ಧಿ ಸೇವೆಯೊಂದಿಗೆ ಸಂಘದ ಸದಸ್ಯರುಗಳ ಸಹಕಾರದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ ಎಂದು ಹೇಳಿದರು. ಈ ಸಂದರ್ಭ ಸಂಘದ ಹಿರಿಯ ವರ್ತಕರುಗಳಾದ ಕೆ.ಕೆ. ಶ್ರೀನಿವಾಸ್, ಎ.ವಿ. ವೆಂಕಟೇಶ್, ಎಸ್. ಭಾಸ್ಕರ್, ಎನ್. ರೇಣುಕಾಚಾರ್ಯ, ಎಂ.ಜಿ. ನಾಗರಾಜು ಮತ್ತಿತರರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಜಿ. ಉಲ್ಲಾಸ್ ಶೇಟ್, ಖಜಾಂಚಿ ಎ.ಎನ್. ದಶರಥ, ಎಂ.ಎನ್. ಉಮೇಶ್, ಎಸ್.ಹೆಚ್. ಮಂಜುನಾಥ್, ಬಿ.ಬಿ. ಚಂದ್ರು, ನಿರ್ದೇಶಕ ಗಜಾನನ ಶೇಟ್, ಚಲ್ಲಾರಾಂ ಶೇಟ್, ಎ.ವಿ. ಜಯರಾಂ ಉಪಸ್ಥಿತರಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎ.ಪಿ. ಲೋಕೇಶ್ ಲೆಕ್ಕಪತ್ರ ಮಂಡಿಸಿದರೆ, ಸಹ ಕಾರ್ಯದರ್ಶಿ ಎ.ವಿ. ಜಿತೇಂದ್ರ ವರದಿ ವಾಚಿಸಿದರು. ಎ.ಡಿ. ವಿಮಲಾ ದಶರಥ್ ನಿರೂಪಿಸಿದರು.