ಸೋಮವಾರಪೇಟೆ,ಜು.31: ‘ತಾಲೂಕಿನಾದ್ಯಂತ ಡ್ರಗ್ಸ್ ಮಾಫಿಯಾ ದಂಧೆ ಮಿತಿಮೀರಿದ್ದು, ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳೂ ಸಹ ಇದಕ್ಕೆ ಬಲಿ ಯಾಗುತ್ತಿದ್ದಾರೆ. ನಿಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಎಲ್ಲವೂ ತಿಳಿದಿದೆ. ಮಾಫಿಯಾದೊಂದಿಗೆ ಕೈಜೋಡಿಸಲು ಹೇಳಬೇಡಿ. ಗಾಂಜಾ ಸೇರಿದಂತೆ ಇತರ ಡ್ರ್ಗ್ಸ್ ಮಾಫಿಯಾದ ಮೂಲವನ್ನು ಹುಡುಕಿ ಬೆಂಡ್ ಎತ್ತಿ’ ಎಂದು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಶಾಸಕ ಅಪ್ಪಚ್ಚು ರಂಜನ್ ಖಡಕ್ ಆದೇಶ ನೀಡಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸೋಮವಾರಪೇಟೆ,ಕುಶಾಲನಗರ, ಶನಿವಾರಸಂತೆ, ಸುಂಟಿಕೊಪ್ಪ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಗಾಂಜಾ ಸೇವನೆ ನಡೆಯುತ್ತಿದೆ. ಈ ಬಗ್ಗೆ ನಮಗೆ ಹಲವಷ್ಟು ದೂರುಗಳು ಬಂದಿವೆ. ಸಿವಿಲ್ ಡ್ರೆಸ್ನಲ್ಲಿ ಓಡಾಡುವ ಪೊಲೀಸ್ ಪೇದೆಗಳಿಗೆ ಇವೆಲ್ಲವೂ ಗೊತ್ತಿದೆ. ದಂಧೆ ಕೋರರಿಂದ ಮಾಮೂಲಿ ಪಡೆಯುವ ಬಗ್ಗೆಯೂ ಮಾಹಿತಿ ಇದೆ. ಹಣ ಪಡೆದು ಇಂತಹ ಕೃತ್ಯಗಳಿಗೆ ಸಪೋರ್ಟ್ ಮಾಡೋದನ್ನು ಸಹಿಸಲು ಆಗುವದಿಲ್ಲ.
(ಮೊದಲ ಪುಟದಿಂದ) ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ನಿರ್ದೇಶನ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳೂ ಗಾಂಜಾಕ್ಕೆ ಬಲಿಯಾಗುತ್ತಿದ್ದಾರೆ. ಸಂಜೆಯಾದೊಡನೆ ಸೋಮವಾರ ಪೇಟೆಯ ಜೂನಿಯರ್ ಕಾಲೇಜು ಬಳಿಯಲ್ಲೇ ವ್ಯಸನಿಗಳ ಅಡ್ಡೆ ಇರುತ್ತದೆ. ಗಾಂಜಾ ಮಾರುವವನ ಮೂಲ ಹುಡುಕಿ ಸರಿಯಾಗಿ ಬೆಂಡ್ ಎತ್ತಬೇಕು. ನಿಮ್ಮ ಮಕ್ಕಳು ಇಲ್ಲಿಲ್ಲ, ಪಾಪದವರ ಮಕ್ಕಳು ವ್ಯಸನಕ್ಕೆ ಬಲಿಯಾಗಲು ನೀವು ಬಿಡಬಾರದು. ಮಕ್ಕಳ ವ್ಯಸನಕ್ಕೆ ಇಡೀ ಕುಟುಂಬ ಬಲಿಯಾಗುತ್ತೆ. ತಕ್ಷಣ ಇದಕ್ಕೆ ಕಡಿವಾಣ ಹಾಕಿ. ಕ್ರೈಂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಎಂದು ಶಾಸಕ ಅಪ್ಪಚ್ಚುರಂಜನ್ ಸೂಚಿಸಿದರು.
ನೈಟ್ ಬೀಟ್ ಹೆಚ್ಚಿಸಿ: ಇಲ್ಲಿನ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪುಂಡ ಪೋಕರಿಗಳು ಠಿಕಾಣಿ ಹೂಡುತ್ತಾರೆ. ವಾಹನದಲ್ಲಿ ಬಂದು ಮದ್ಯ ಸೇವನೆ ಮಾಡುತ್ತಿದ್ದಾರೆ. ಬಾಲಕಿಯರ ವಸತಿ ನಿಲಯವೂ ಈ ಸ್ಥಳದಲ್ಲಿರುವದರಿಂದ ಕಡ್ಡಾಯವಾಗಿ ಪೊಲೀಸರು ನೈಟ್ ಬೀಟ್ ಮಾಡಬೇಕು. ವಾಹನವನ್ನು ನಿಲ್ಲಿಸಿ ಮದ್ಯಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಒತ್ತಾಯಿಸಿದರು.
ಅಕ್ರಮ ಇಸ್ಪೀಟ್ಗೆ ಕಡಿವಾಣ ಹಾಕಿ: ರಿಕ್ರಿಯೇಷನ್ ಕ್ಲಬ್ಗಳ ಹೆಸರಿನಲ್ಲಿ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜು ಆಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಶನಿವಾರಸಂತೆಯಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ತಾ.ಪಂ. ಸದಸ್ಯರೋರ್ವರೇ ಇದರ ಕಿಂಗ್ಪಿನ್ ಆಗಿದ್ದು, ಇವರೇ ಇಸ್ಪೀಟ್ ಆಡಿಸುತ್ತಿರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಇಂತಹ ಅಕ್ರಮಗಳಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಿ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸೂಚಿಸಿದರು.
ಪಾರ್ಕಿಂಗ್ ಸಮಸ್ಯೆ: ಸೋಮವಾರಪೇಟೆ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ತಲೆದೋರಿದ್ದು, ಪೊಲೀಸ್ ಇಲಾಖೆಯವರು ಸಂಬಂಧಿಸಿದ ಪ.ಪಂ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕರು ಪ.ಪಂ. ಮುಖ್ಯಾಧಿಕಾರಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಅವರಿಗೆ ನಿರ್ದೇಶಿಸಿದರು.
ಪಾನಮತ್ತ ವೈದ್ಯರ ವಿರುದ್ಧ ಕ್ರಮ: ಕೊಡ್ಲಿಪೇಟೆ ಆಸ್ಪತ್ರೆಯಲ್ಲಿ ವೈದ್ಯರೋರ್ವರು ಪಾನಮತ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ. ತಕ್ಷಣ ಈ ವೈದ್ಯರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಅವರಿಗೆ ಸೂಚನೆ ನೀಡಲಾಯಿತು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಬೇಕಾಗಿರುವ ವೈದ್ಯರುಗಳ ಪಟ್ಟಿ ನೀಡಿ. ಮಡಿಕೇರಿಯ ವೈದ್ಯಕೀಯ ಕಾಲೇಜಿನಿಂದ ಅಗತ್ಯ ವೈದ್ಯರನ್ನು ನಿಯೋಜಿಸಲಾಗುವದು ಎಂದ ರಂಜನ್, ಶಾಂತಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ, ಆಲೂರು ಸಿದ್ದಾಪುರ, ಸೂರ್ಲಬ್ಬಿ ಆಸ್ಪತ್ರೆಗಳಿಗೂ ವೈದ್ಯರನ್ನು ತಕ್ಷಣ ನಿಯೋಜಿಸಲು ಕ್ರಮ ವಹಿಸುವಂತೆ ಆರೋಗ್ಯಾಧಿ ಕಾರಿಗೆ ತಿಳಿಸಿದರು. ಹೋಮಿ ಯೋಪತಿ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಆಸ್ಪತ್ರೆಯಲ್ಲಿ ದೊರಕುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಸಾರ್ವಜನಿಕವಾಗಿ ಪ್ರಚುರ ಪಡಿಸಬೇಕೆಂದು ಡಾ. ಸ್ಮಿತಾ ಅವರಿಗೆ ಸೂಚಿಸಿದರು.
ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಿಗೆ 23 ವೈದ್ಯರು ಮಂಜೂರಾಗಿದ್ದು, 8 ಮಂದಿ ಕರ್ತವ್ಯನಿರ್ವಹಿಸುತ್ತಿದ್ದಾರೆ. 15ಹುದ್ದೆಗಳು ಖಾಲಿ ಉಳಿದಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 18 ಹುದ್ದೆಗಳಿದ್ದು, 14 ಮಂದಿ ಕರ್ತವ್ಯದಲ್ಲಿದ್ದಾರೆ ಎಂದು ಆರೋಗ್ಯಾಧಿಕಾರಿ ರವಿಕುಮಾರ್ ಅವರು ಸಭೆಯ ಗಮನಕ್ಕೆ ತಂದರು.
ಹಾಸ್ಟೆಲ್ಗಳಿಗೆ ಭೇಟಿ: ತಾಲೂಕಿನ ಬಿಸಿಎಂ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್ಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಕಚೇರಿ ಮತ್ತು ವಸತಿ ನಿಲಯದಲ್ಲಿ ಬಯೋಮೆಟ್ರಿಲ್ ಅಳವಡಿಸಬೇಕು. ತಾನು ಎಲ್ಲಾ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ನೀಡಲಿದ್ದು, ಊಟ ಮತ್ತು ವಸತಿಯನ್ನು ಖುದ್ದು ಪರಿಶೀಲಿಸುª Àದಾಗಿ ಅಧಿಕಾರಿ ಶ್ರೀಕಾಂತ್ ಅವರಿಗೆ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಯಿಂದ ನಡೆಯತ್ತಿರುವ ಕೊಡ್ಲಿಪೇಟೆ ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಅಡುಗೆ ಸಹಾಯಕ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. 20 ವಿದ್ಯಾರ್ಥಿಗಳ ಹಾಜರಾತಿಯಿದ್ದರೆ 43 ವಿದ್ಯಾರ್ಥಿಗಳ ಲೆಕ್ಕ ತೋರಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ತಕ್ಷಣ ವಾರ್ಡನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸ್ಸು ಮಾಡವಂತೆ ಸಮಾಜಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಅವರಿಗೆ ಶಾಸಕರು ಸೂಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಕೌಶಲ್ಯ ಯೋಜನೆಯಡಿ ಯಾವದೇ ಕಾರ್ಯಕ್ರಮಗಳು ಆಗುತ್ತಿಲ್ಲ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಆರೋಪಿಸಿದರು.
5 ವರ್ಷದೊಳಗೆ ಎಲ್ಲರಿಗೂ ನಿವೇಶನ: ಮುಂದಿನ 5 ವರ್ಷದೊಳಗೆ ತಾಲೂಕಿನ ಎಲ್ಲರಿಗೂ ನಿವೇಶನ ಮತ್ತು ಸ್ವಂತ ಮನೆ ಇರಬೇಕು. ಈ ನಿಟ್ಟಿನಲ್ಲಿ ತಕ್ಷಣ ವರದಿಗಳು ಸಿದ್ದಗೊಳ್ಳಬೇಕು. ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಪಟ್ಟಿ ಸಿದ್ಧಗೊಳಿಸಬೇಕು. ಈಗಾಗಲೇ 6231 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲರಿಗೂ ಮುಂದಿನ 5 ವರ್ಷಗಳ ಒಳಗೆ ನಿವೇಶನ ಒದಗಿಸಲಾಗುವದು ಎಂದು ಶಾಸಕ ರಂಜನ್ ನುಡಿದರು.
ಈ ನಿಟ್ಟಿನಲ್ಲಿ ಹತ್ತಾರು ಏಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ್ ಮಹೇಶ್ ಅವರಿಗೆ ನಿರ್ದೇಶನ ನೀಡಲಾಯಿತು.
ಅಧಿಕಾರಿಗಳ ಷಡ್ಯಂತ್ರ: ಸೋಮವಾರಪೇಟೆಗೆ ಬರುವ ಹಲವಷ್ಟು ಯೋಜನೆಗಳನ್ನು ಕುಶಾಲನಗರ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳಿಸಲು ಅಧಿಕಾರಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. ಅಂಬೇಡ್ಕರ್ ವಸತಿ ಶಾಲೆಯೇ ಇದಕ್ಕೆ ಸಾಕ್ಷಿ ಎಂದು ಅಭಿಮನ್ಯುಕುಮಾರ್ ಆರೋಪಿಸಿದರು.
ತೋಳೂರುಶೆಟ್ಟಳ್ಳಿಯಲ್ಲಿ 13 ಎಕರೆ ಜಾಗವಿದ್ದು, ಇಲ್ಲಿ ಅಂಬೇಡ್ಕರ್ ವಸತಿ ಶಾಲೆಯನ್ನು ಪ್ರಾರಂಭಿಸಲು ಯೋಜನೆ ಸಿದ್ದಪಡಿಸಲಾಗಿದೆ. ಇದೀಗ ತಾತ್ಕಾಲಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲಿ ವಸತಿ ಶಾಲೆ ನಡೆಯುತ್ತಿದೆ. ಆದರೂ ಸಹ ಕೆಲವರು ಇದನ್ನು ಕುಶಾಲನಗರಕ್ಕೆ ಸ್ಥಳಾಂತರಿಸಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಉಪಾಧ್ಯಕ್ಷರು ಅಭಿಪ್ರಾಯಿಸಿದರು.
ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಲು ಸೂಚನೆ: ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸಬೇಕು ಎಂದು ಸಭೆಯಲ್ಲಿದ್ದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಅಪ್ಪಚ್ಚು ರಂಜನ್ ಸೂಚಿಸಿದರು.
ಸೋಮವಾರಪೇಟೆ ಪ.ಪಂ.ಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ಅಂತ್ಯದೊಳಗೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವದು ಎಂದು ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ರಂಜನ್ ನಿರ್ದೇಶಿಸಿದರು.
ಅಭಯಾರಣ್ಯ ಮಧ್ಯೆ ರಸ್ತೆ: ತಾಲೂಕಿನ ವಾಲ್ನೂರು-ಮಾಲ್ದಾರೆ ವ್ಯಾಪ್ತಿಯ ಅಭಯಾರಣ್ಯದೊಳಗೆ ಸ್ವತಃ ಅರಣ್ಯ ಇಲಾಖೆಯವರೇ ರಸ್ತೆ ನಿರ್ಮಿಸಿ ಆರೆಂಜ್ ಕೌಂಟಿ ರೆಸಾರ್ಟ್ನವರಿಗೆ ಸಫಾರಿ ಮಾಡಲು ಬಿಟ್ಟುಕೊಟ್ಟಿದ್ದಾರೆ. ಸ್ಥಳೀಯರು ಒಣ ಸೌದೆ ತೆಗೆದರೆ ಕೇಸ್ ಹಾಕುವ ಅಧಿಕಾರಿಗಳು ಇವರಿಗೆ ರಸ್ತೆಯನ್ನೇ ನಿರ್ಮಿಸಿಕೊಟ್ಟಿದ್ದಾರೆ. ಆರೆಂಜ್ ಕೌಂಟಿ ಅವರಿಂದ ಇಲಾಖೆಯವರು ಡೀಲ್ ಆಗಿದ್ದಾರೆ ಎಂದು ಸ್ಥಳೀಯರು ಮಾತಾಡುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಭುವನೇಂದ್ರ ಆರೋಪಿಸಿದರು.
ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಶಾಸಕರು ತಿಳಿಸಿದರು. ಕಾಡಾನೆ ಹಾವಳಿಯಿಂದ ನಷ್ಟಕ್ಕೊಳ ಗಾಗುವ ಕೃಷಿಕರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುತ್ತಿದೆ. ವಾಲ್ನೂರು ವ್ಯಾಪ್ತಿಯಲ್ಲಿ 8 ಕಿ.ಮೀ. ಉದ್ದಕ್ಕೆ ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳಾದ ಚಿಣ್ಣಪ್ಪ, ಲಕ್ಷ್ಮೀಕಾಂತ್ ಅವರುಗಳು ಸಭೆಗೆ ತಿಳಿಸಿದರು.
ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಪುಂಡಾನೆಯೊಂದು ಹೆಚ್ಚಿನ ಅನಾಹುತ ಮಾಡುತ್ತಿದ್ದು, ಇದನ್ನು ಸೆರೆಹಿಡಿಯಬೇಕೆಂದು ನಾಮ ನಿರ್ದೇಶಿತ ಸದಸ್ಯರಾದ ಹಕೀಂ ಅವರು ಅರಣ್ಯಾಧಿಕಾರಿಯನ್ನು ಆಗ್ರಹಿಸಿದರು.
ಶಿಕ್ಷಣ ಇಲಾಖೆ ವಿರುದ್ಧ ಗರಂ: ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿ ದಂತೆ ಶಾಸಕರು ಶಿಕ್ಷಣ ಇಲಾಖೆಯ ವಿರುದ್ಧ ಗರಂ ಆದರು. ಸರ್ಕಾರಿ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರೂ ಸಹ ಗುಣಾತ್ಮಕ ಪಾಠ ನಡೆಯುತ್ತಿಲ್ಲ. ಅತೀ ಹೆಚ್ಚು ಸಂಬಳ ಪಡೆಯುವ ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಹೇಗೆ? ಎಂದು ಬಿಇಓ ನಾಗರಾಜಯ್ಯ ಅವರನ್ನು ಪ್ರಶ್ನಿಸಿದ ಶಾಸಕರು, ಫಲಿತಾಂಶ ಉತ್ತಮಗೊಳಿಸಲು ಪ್ರಯತ್ನಿಸಬೇಕು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ತಮ್ಮ ಕಚೇರಿಯಲ್ಲಿ ಶೀಘ್ರ ಸಭೆ ಕರೆಯುವದಾಗಿ ತಿಳಿಸಿದರು.
ಈಗಾಗಲೇ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಗ್ರಾ.ಪಂ.ಗಳಿಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಇಓ ಅವರಿಗೆ ಶಾಸಕರು ಸೂಚಿಸಿದರು. ಸೂರ್ಲಬ್ಬಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ರಾಜಕೀಯ ಪ್ರೇರಿತವಾಗಿದ್ದಾರೆ. ಚುನಾವಣಾ ರಾಜಕೀಯ ಭಾಷಣ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದರು.
ಯಾವದೇ ರಸ್ತೆಗಳಿಗೆ ಬಿಲ್ ಮಾಡುವದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿ ಹಣ ಪಾವತಿಸಬೇಕು. ಈಗಾಗಲೇ ರಸ್ತೆ ಮಾಡದೇ ಹಣ ಪಾವತಿಸಿರುವ ಪ್ರಕರಣಗಳು ನಡೆದಿದೆ. ಮುಂದೆ ಹೀಗಾಗಬಾರದು ಎಂದು ಲೋಕೋಪಯೋಗಿ ಇಲಾಖಾ ಅಭಿಯಂತರ ಶಿವಕುಮಾರ್ ಅವರಿಗೆ ರಂಜನ್ ಸೂಚಿಸಿದರು.
ಪ್ರಸಕ್ತ ವರ್ಷದ ಭಾರೀ ಮಳೆಗೆ ತಾಲೂಕಿನಲ್ಲಿ 720 ವಿದ್ಯುತ್ ಕಂಬಗಳು ಹಾನಿಯಾಗಿದ್ದು, 439 ಕಂಬಗಳನ್ನು ಬದಲಿಸಲಾಗಿದೆ. ಉಳಿದೆಡೆ ಕೆಲಸ ಪ್ರಗತಿಯಲ್ಲಿದೆ ಎಂದು ಇಲಾಖೆಯ ಎಇಇ ಅಶೋಕ್ ಸಭೆಗೆ ತಿಳಿಸಿದರು. ಕುಂಬೂರು, ಮೂವತ್ತೊಕ್ಲು, ಗರ್ವಾಲೆ, ಸೂರ್ಲಬ್ಬಿ ಭಾಗಕ್ಕೆ ತಕ್ಷಣ ವಿದ್ಯುತ್ ಪೂರೈಸಬೇಕು. ಕುಡಿಯುವ ನೀರಿನ ಸಂಪರ್ಕದ ವಿದ್ಯುತ್ ಮಾರ್ಗವನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸಬೇಕು ಎಂದು ಶಾಸಕರು ತಿಳಿಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಕಾರ್ಯನಿರ್ವಹಣಾಧಿಕಾರಿ ಸುನಿಲ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಹಶೀಲ್ದಾರ್ ಮಹೇಶ್, ನಾಮ ನಿರ್ದೇಶಿತ ಸದಸ್ಯರಾದ ಧರ್ಮಪ್ಪ, ಪ್ರಭಾ ಅವರುಗಳು ಉಪಸ್ಥಿತರಿದ್ದರು.