ಕುಶಾಲನಗರ, ಜು. 30: ಪತ್ರಕರ್ತರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿಭಾಯಿಸುವದರೊಂದಿಗೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ನಿರ್ವಹಿಸಬೇಕಾಗಿದೆ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ತಿಳಿಸಿದರು.
ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ಸ್ಥಳೀಯ ವಿವೇಕಾನಂದ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜಕ್ಕೆ ಕಂಟಕವಾಗು ವಂತಹ ಸುದ್ದಿಗಳನ್ನು ನೀಡಿ ಅಚಾತು ರ್ಯಗಳಿಗೆ ಅವಕಾಶ ಕಲ್ಪಿಸಬಾರದು ಎಂದರು. ವಿದ್ಯಾರ್ಥಿಗಳು ಪತ್ರಿಕಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅನಂತಶಯನ ಅವರು, ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಗಳಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಪ್ರಸಕ್ತ ಸಂಕಷ್ಟದ ಹಾದಿಯಲ್ಲಿರುವದು ವಿಷಾದನೀಯ. ತಮ್ಮ ಜೀವನ ನಿರ್ವಹಣೆಗೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಅಡ್ಡದಾರಿ ಮೂಲಕ ಆಮಿಷಕ್ಕೆ ಒಳಗಾಗುವದು ಸರಿಯಲ್ಲ ಎಂದ ಮಹದೇವ್, ಪತ್ರಕರ್ತರ ನೆರವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ; ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿರುವ ಕೊಪ್ಪ ಗ್ರಾಮದಲ್ಲಿ ಕ್ಲಬ್ ಸದಸ್ಯರಿಗೆ ನಿವೇಶನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ. ಮೋಹನ್‍ಕುಮಾರ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಕಷ್ಟಪಟ್ಟು ಓದಿ ಜ್ಞಾನವಂತರಾಗÀಬೇಕೆಂದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ.ವಿ. ಹರ್ಷಿತ್, ಎಂ.ಎ. ಅಜೀಜ್, ಕೆ.ಪಿ. ರಂಜನ್, ಬಿ.ಡಿ. ಗೌರಮ್ಮ, ಎಂ. ಮೋಹನ್‍ಕುಮಾರ್ ಗೌಡ, ಆಶಾ ಸುರೇಶ್, ಹಾ.ತಿ. ಜಯಪ್ರಕಾಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪ್ರೆಸ್‍ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಕಿರಿಯ ಅಭಿಯಂತರ ಹೆಚ್.ಆರ್. ರಘುಕುಮಾರ್, ಪತ್ರಕರ್ತ ರೆಜಿತ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್, ದೈಹಿಕ ಶಿಕ್ಷಕ ಡಾ.ಸದಾಶಿವಯ್ಯ ಪಲ್ಲೇದ್, ಬಾರವಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ಉದ್ಯಮಿ ಸಲಾಂ ಮತ್ತಿತರರು ಇದ್ದರು.
ಪ್ರೆಸ್‍ಕ್ಲಬ್ ಟ್ರಸ್ಟ್ ಗೌರವಾಧ್ಯಕ್ಷ ಟಿ.ಆರ್. ಪ್ರಭುದೇವ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸ್, ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ ಸೇರಿದಂತೆ ಪದಾಧಿಕಾರಿಗಳು, ಕಾಲೇಜು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು